ಜನಪದರ ಕಣ್ಣಲ್ಲಿ ಮಾಯಿ, ಮಹಾತಾಯಿ

ಹೆಣ್ಣಿನ ಬಾಳು ಸಾರ್ಥಕ್ಯವನ್ನು ಪಡೆಯುವುದೇ ತಾಯ್ತನದಿಂದ. ಹೆಣ್ಣು ಶಿಶುವಾಗಿ ಹುಟ್ಟಿ, ಬಾಲಕಿಯಾಗಿ ಬೆಳೆದು, ಕನ್ಯೆಯಾಗಿ ಗಂಡನ ಕೈಹಿಡಿದ ನಂತರ, ತಾಯಿಯಾಗಿ ತನ್ನ ಕಂದನ ಸತ್ಪ್ರಜೆಯಾಗಿ ರೂಪಿಸಿದ ನಂತರವೇ ಹೆಣ್ಣಿನ ಬಾಳು ಸುಂದರ. ಪ್ರತಿಯಾಬ್ಬ ಹೆಣ್ಣೂ ಕಂದನ ಎತ್ತಿ ಮುದ್ದಾಡಲು ಹಾತೊರೆಯುತ್ತಾಳೆ. ಅದುವೇ ಜಗದ ಸೃಷ್ಟಿ. ಅಮ್ಮ ಎಂಬ ಎರಡಕ್ಷರದಲಿ ತುಂಬಿಹ ಶಕ್ತಿಯ ವರ್ಣಿಸಲು ಕವಿಯೇ ಆಗಬೇಕಿಲ್ಲ. ಸದಾ ಮಕ್ಕಳಿಗಾಗಿ ತುಡಿವ ತಾಯಿಯ ಹಂಬಲವನ್ನು ನಮ್ಮ ಜನಪದರೂ ತಮ್ಮದೇ ಆದ ಶೈಲಿಯಲ್ಲಿ ವರ್ಣಿಸಿದ್ದಾರೆ. ಅಶ್ವತ್ಥ ವೃಕ್ಷವ ಸುತ್ತಿ, ಕಂಡ ಕಂಡ ದೇವರಿಗೆಲ್ಲಾ ಕೈ ಮುಗಿದು, ಮಗುವೊಂದನ್ನು ಕರುಣಿಸುವಂತೆ ಕೋರುವ ಆ ತಾಯಿ, ತನ್ನ ಕಂದನಿಗಾಗಿ ಹೇಗೆ ಹಪಹಪಿಸುತ್ತಾಳೆ, ಕಂದನ ಹೇಗೆ ಲಾಲಿಸುತ್ತಾಳೆ, ಹೇಗೆ ಪೋಷಿಸುತ್ತಾಳೆ ಎಂಬುದನ್ನು ಜನಪದರು ತ್ರಿಪದಿಗಳಲ್ಲಿ ಮನೋಜ್ಞವಾಗಿ ಬಣ್ಣಿಸಿದ್ದಾರೆ. ಮದುವೆಯಾಗಿ ನಾಲ್ಕಾರು ವರ್ಷ ಕಳೆದರೂ ಮಕ್ಕಳಾಗದ ಹೆಣ್ಣಿಗೆ ಬಂಜೆ ಎಂಬ ಪಟ್ಟ ಅಂಟಿಕೊಳ್ಳುತ್ತದೆ. ಹೆಣ್ಣು ಏನು ಬೇಕಾದರೂ ಸಹಿಸಿಯಾಳು, ಆದರೆ ಈ ಬಂಜೆ ಎಂಬ ಭಾರವನ್ನು ಮಾತ್ರ ಹೊರಲಾರಳು ಅದಕ್ಕಾಗೇ ಹೆಣ್ಣು ಹೀಗೆ ಹೇಳುತ್ತಾಳೆ... ಕಂದನ ಕೊಡು ಸಿವನೆ ಬಂಧನ ಬಿಡಲಾರೆ ಹಂಗೀನ ಬಾನ ಉಣಲಾರೆ ಮರ್ತ್ಯದಾಗ ಬಂಜೆಂಬ ಶಬುದ ಹೊರಲಾರೆ ಶಿವನನ್ನು ಮಗುವೊಂದನ್ನು ಕರುಣಿಸುವಂತೆ ಪ್ರಾರ್ಥಿಸುವ ಹೆಣ್ಣು, ಮಕ್ಕಳಿಲ್ಲದ ಮೇಲೆ ಈ ಬದುಕು ಇನ್ನೇಕೆ ಎಂದೇ ಭಾವಿಸುತ್ತಾಳೆ. ಇದನ್ನು ಅವಳು ಹೇಗೆ ಹೇಳುತ್ತಾಳೆ ಗೊತ್ತೆ? ಬಾಲಕರಿಲ್ಲದ ಬಾಳಿದ್ಯಾತರ ಜನ್ಮ ಬಾಡೀಗಿ ಎತ್ತು ದುಡಿದಾಂಗ ಬಾಳೆಲೆಯ ಹಾಸ್ಯುಂಡು ಬೀಸಿ ಒಗೆದಂಗ ಮಕ್ಕಳಿಲ್ಲದ ತಾಯಿಯ ಜನ್ಮ ಬಾಡಿಗೆ ಎತ್ತಿನ ದುಡಿಮೆಯಂತೆ, ಭಕ್ಷ್ಯ ಭೋಜ್ಯಗಳನ್ನು ಊಟ ಮಾಡಿದ ನಂತರ, ಹೇಗೆ ಬಾಳೆಯ ಎಲೆಗೆ ಬೆಲೆ ಇಲ್ಲವೋ ಅಂತೆಯೇ ಆದೀತು ತನ್ನ ಬಾಳು ಎಂದು ನೋವು ತೋಡಿಕೊಳ್ಳುತ್ತಾಳೆ. ಅಳಲಿ, ಕಾಡಲಿ, ಏನೇ ಮಾಡಲಿ ಮನೆ ತುಂಬ ಮಕ್ಕಳಿರಲಿ ಎನ್ನುತ್ತಾಳೆ. ಅತ್ತರೆ ಅಳಲವ್ವ ಈ ಕೂಸು ನನಗಿರಲಿ ಕೆಟ್ಟರೆ ಕೆಡಲಿ ಮನೆಗೆಲಸ ಕಂದನಂಥ ಮಕ್ಕಳಿರಲವ್ವ ಮನೆತುಂಬ ತನ್ನ ಮಗು ರಚ್ಚೆ ಮಾಡುವುದಿಲ್ಲ , ಅತ್ತು ಕಾಡುವುದಿಲ್ಲ, ಇಂತಹ ಮಕ್ಕಳು ಮನೆತುಂಬ ಇರಲಿ ಎನ್ನುವಾಗ ಅತ್ತು ಕಾಡುವನಲ್ಲ ಮತ್ತೆ ಬೇಡುವನಲ್ಲ ಎತ್ತಿಕೊಳ್ಳೆಂಬ ಹಟವಿಲ್ಲ ನಿನ್ನಂಥ ಮಕ್ಕಳಿರಲವ್ವ ಮನೆತುಂಬ ಎಂದು ಹಾಡುತ್ತಾಳೆ. ಇಷ್ಟೇ ಅಲ್ಲ ತನ್ನ ಮಗನ ಆಕೆ ವರ್ಣಿಸುವುದೇ ಹೀಗೆ ಅಳುವ ಕಂದನ ತುಟಿಯು ಹವಳಾದ ಕುಡಿಹಾಂಗ ಕುಡಿಹುಬ್ಬು ಬೇವಿನೆಸಳ್ಹಾಂಗ ಕಣ್ಣೋಟ ಶಿವನ ಕೈಯಲಗು ಹೊಳೆದಾಂಗ ಈಶ್ವರನ ಕೈಯಲ್ಲಿನ ತ್ರಿಶೂಲದಂತೆ ಹೊಳೆಯುತ್ತದೆ ತನ್ನ ಮಗನ ಕಣ್ಣು ಎಂದು ಬೀಗುತ್ತಾಳೆ. ನಗು ನಗುತ್ತಾ ತನ್ನ ಮಗನ ಆಟ ಆಡಲು ಕಳಿಸುವ ತಾಯಿ ಆಡಿ ಬಾ ನನಕಂದ ಅಂಗಾಲ ತೊಳೆದೇನು ತೆಂಗೀನ ಕಾಯಿ ತಿಳಿನೀರು ತಕ್ಕೊಂಡು ಬಂಗಾರದ ಪಾದ ತೊಳೆದೇನು ಆಡಿ, ದಣಿದು ಬಂದ ಮಗುವ ಕಾಲನ್ನು ಎಳನೀರಲ್ಲಿ ತೊಳೆಯುವೆ ಎನ್ನುವ ತಾಯಿ ತನ್ನ ಮಗು ಓಡಾಡಿಕೊಂಡಿದ್ದರೆ, ಬೀಸಣಿಗೆ ಬೇಡ ಎನ್ನುತ್ತಾಳೆ ಕೂಸು ಇದ್ದ ಮನೆಗೆ ಬೀಸಣಿಗೆ ಯಾತಾಕ ಕೂಸು ಕಂದಯ್ಯ ಒಳ ಹೊರಗೆ ಆಡಿದರೆ ಬೀಸಣಿಗೆ ಗಾಳಿ ಸುಳಿದಾವು ಮನೆಗೆಲ್ಲಾ ಮಗುವೆ ಚೆಂದ ಎನ್ನುವ ತಾಯಿ ತನ್ನ ಮಗನ ಚೆಂದವನ್ನು ವರ್ಣಿಸುವುದು ಹೀಗೆ ಹಾವಿನ ಹೆಡಿ ಚೆಂದ ಮಾವಿನ ಮಿಡಿ ಚೆಂದ ಹಾರಾಡಿ ಬರುವ ಗಿಣಿ ಚೆಂದ ಕಂದಯ್ಯ ನೀ ಚೆಂದ ನಮ್ಮ ಮನಿಗೆಲ್ಲಾ. ಜನಪದದಲ್ಲಿ ಮಗು ಹಾಗೂ ತಾಯಿಯ ಮಮತೆಯನ್ನು ಹೀಗೆ ವರ್ಣಿಸಲಾಗಿದ್ದರೆ, ಮಕ್ಕಳಿಗಾಗಿ ಪುತ್ರ ಕಾಮೇಷ್ಠಿ ಯಾಗ ಮಾಡಿ, ತಪಸ್ಸನ್ನು ಆಚರಿಸಿ ದೇವರಿಂದ ಸಂತಾನ ಭಾಗ್ಯ ಕರುಣಿಸು ಎಂದು ವರ ಕೇಳಿದ ಹತ್ತಾರು ಕಥೆಗಳು ನಮ್ಮ ಪುರಾಣದಲ್ಲಿವೆ. ಜನಪದರ ನಡುವಿನ ಆ ತಾಯಿ ತಾನು ಕೇಳಿದ ಕಥೆಯ ಎಳೆಯನ್ನೇ ಹಿಡಿದು, ತನ್ನದೇ ಆದ ಆಡು ಮಾತಿನಲ್ಲಿ ಕಂದನ ಬಣ್ಣಿಸುವ ಪರಿ, ಪಂಡಿತ - ಪಾಮರರ ಮನವನ್ನೂ ಗೆಲ್ಲುತ್ತವೆ.

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...