ಜೋಗುಳ ಪದಗಳು (ಮಕ್ಕಳನ್ನು ವರ್ಣಿಸುವ ಜನಪದ ಗೀತೆಗಳು)

ತೋಳುದ್ದ ತಲೆದಿಂಬು ಮಾರುದ್ದ ಹಾಸಿಗೆ 
ಮಾಣಿಕ್ಯದಂಥ ಮಗ ಮುಂದೆ ಮಲಗಿರಲು
ಮಾರಾಯ್ರ ಗೊಡವಿ ನನಗೇನ ||

ಮಕ್ಕಳ ತಾಯವ್ವ ಕೆಟ್ಟೆನೆನ್ನಲು ಬೇಡ
ಪಕ್ಷಿ ಜಾತ್ಯಾಗೆ ಗರುಡನು ತನ್ನವ್ವನ
ಹುಟ್ಟಿದ ಸೆರೆಯ ಬಿಡಿಸ್ಯಾನು ||

ಜನಕ ರಾಯನ ಮಗಳು ವನಕೆ ತೊಟ್ಟಿಲ ಕಟ್ಟಿ
ಕುಶಲವರನಿಟ್ಟು ತೂಗ್ಯಾಳು ಸೀತಾದೇವಿ
ನಗುತ ವನವಾಸ ಕಳೆದಾಳು ||

ಬಡತನ ನನಗಿರಲಿ ಬಹಳ ಮಕ್ಕಳಿರಲಿ
ಮೇಲೆ ಗುರುವಿನ ದಯೆಯಿರಲಿ ನನ ಗುರುವೆ
ಬಡತನದ ಚಿಂತೆ ನಿನಗಿರಲಿ ||

ಬೆಳಗಾಗ ನಾನೆದ್ದು ಯಾರ‍್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯೋಳ |
ಎಳ್ಳುಜೀರಿಗೆ ಬೆಳೆಯೊಳ ಭೂಮಿತಾಯ
ಎದ್ದೊಂದು ಗಳಿಗೇ ನೆನೆದೇನ ||

ತೊಟ್ಟಿಲೊಳಗಿನ ಕಂದ ತೋಳ ಬೀಸುವ ಚಂದ |
ರಟ್ಟಿ ನೊಂದಾವು ಎಲೆ ಕಂದ | ನಿಮ್ಮವ್ವ
ದೃಷ್ಟಿ ಮುರಿಲಾಕೆ ಅರಿಯಳು.    ||

ಅಳುವ ಕಂದನ ತುಟಿಯು ಹವಳದ ಕುಡಿಹಂಗ |
ಕುಡಿ ಹುಬ್ಬು ಬೇವಿನೆಸಳಂಗ | ಕಣ್ ನೋಟ
ಶಿವನ ಕೈ ಅಲಗು ಹೊಳೆದಂಗ ||

ಯಾರ ಇದ್ದರು ನನ್ನ ತಾಯವ್ವನ್ಹೋಲೋರ |
ಸಾವಿರ ಕೊಳ್ಳಿ ಒಲಿಯಾಗ | ಇದ್ದರ
ಜ್ಯೋತಿ ನಿನ್ನ್ಯಾರು ಹೋಲಾರ –        ||

ತಂದೀಯ ನೆನೆದರೆ ತಂಗಳ ಬಿಸಿಯಾಯ್ತು |
ಗಂಗಾದೇವಿ ನನ್ನ ಹಡೆದವ್ನ | ನೆನೆದರೆ
ಮಾಸಿದ ತಲೆಯು ಮಡಿಯಾಯ್ತು    ||     

ಜಿನದತ್ತ ಜಿನಸ್ವಾಮಿ ಹೊನ್ನ ಪಾರ್ಶ್ವನಾಥ
ನಿನ್ನಂಥ ಒಬ್ಬ ಮಗ ಬೇಕ | ಬಸ್ತ್ಯಾನ
ಪದ್ಮಾವತಿಯಂಥ ಸೊಸೆ ಬೇಕ ||

ಕೂಡಲ ಸಂಗಯ್ಯ ಹೊಳಿಯಾಗ ಹ್ಯಾಂಗಿದ್ದಿ |
ಹಳ್ಳೊತ್ತಿ ಸಣ್ಣ ಮಳಲೊತ್ತಿ | ಗಂಗೀಯ
ನೀರೊತ್ತಿ ಲಿಂಗ ನೆನೆದಾನ…..||

ಪಿಲ್ಲಿ ಕಾಲಿನೋಳೆ ಚೆಲ್ಲಿದ ನೆರಿಗ್ಯೋಳೆ
ಕಲ್ಮೇಲೆ ಕಾಲ ತೊಳಯೋಳೆ | ಲಕ್ಕವ್ವ
ಪಿಲ್ಲಿ ಹೊಳೆದವು ಬಿಸಿಲಿಗೆ ||



ಅತ್ತರೆ ಅಳಲವ್ವ
ಈ ಕೂಸು ನಮಗಿರಲಿ
ಕೆಟ್ಟರ ಕೆಡಲಿ ಮನಿಗೆಲಸ
ಮಕ್ಕಳಿರಲವ್ವ ಮನೆತುಂಬ..||

ಯಾಕಳುವೆ ಎಲೆರಂಗ ಬೇಕಾದ್ದು ನಿನಗೀವೆ
ನಾಕೆಮ್ಮೆ ಕರೆದ ನೊರೆ ಹಾಲು| ಸಕ್ಕರೆ
ನೀ ಕೇಳಿದಾಗ ಕೊಡುವೇನು||

ಯಾತಕಳುತಾನೆಂದು ಎಲ್ಲಾರು ಕೇಳ್ಯಾರು
ಕಾಯದ ಹಾಲ ಕೆನೆ ಬೇಡಿ| ಕಂದಯ್ಯ
ಕಾಡಿ ಕೈಬಿಟ್ಟು ಇಳಿದಾನ||

ಅಳುವ ಕಂದನ ತುಟಿಯು ಹವಳದ ಕುಡಿಹಂಗೆ
ಕುಡಿಹುಬ್ಬು ಬೇವಿನೆಸಳಂಗೆ| ಕಣ್ಣೋಟ
ಶಿವನ ಕೈಯಲಗು ಹೊಳೆದಂತೆ||

ಅತ್ತರೆ ಅಳಲವ್ವ ಈ ಕೂಸು ನನಗಿರಲಿ
ಕೆಟ್ಟರೆ ಕೆಡಲಿ ಮನೆಗೆಲಸ| ಕಂದನಂತ
ಮಕ್ಕಳಿರಲವ್ವ ಮನೆತುಂಬ||

ಜೋಗೂಳ ಹಾಡಿದರೆ ಆಗಲೇ ಕೇಳ್ಯಾನು
ಹಾಲ ಹಂಬಲವ ಮರೆತಾನು| ಕಂದಂಗೆ
ಜೋಗೂಳದಾಗೆ ಅತಿಮುದ್ದು||

ಅತ್ತು ಕಾಡುವನಲ್ಲ ಮತ್ತೆ ಬೇಡುವನಲ್ಲ
ಎತ್ತಿಕೊಳ್ಳೆಂಬ ಹಟವಿಲ್ಲ| ನಿನ್ನಂತ
ಹತ್ತು ಮಕ್ಕಳೂ ಇರಬಹುದು||

ಆಡಿ ಬಾ ಎನ್ನ ಕಂದ ಅಂಗಾಲ ತೊಳೆದೇನ
ತೆಂಗಿನ ಕಾಯಿ ತಿಳಿನೀರ| ತಕ್ಕೊಂಡು
ಬಂಗಾರದ ಮೊರೆ ತೊಳೆದೇನ||

ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕೆ
ಕೂಸು ಕಂದಯ್ಯ ಒಳ ಹೊರಗ| ಆಡಿದರೆ
ಬೀಸಣಿಗೆ ಗಾಳಿ ಸುಳಿದಾವ||

ಹಾಲ್ಬೇಡಿ ಅತ್ತಾನ ಕೋಲಬೇಡಿ ಕುಣದಾನ
ಮೊಸರ್ಬೇಡಿ ಕೆಸರ ತುಳದಾನ|
ನನ ಕಂದನ ಕುಶಲಾದ ಗೆಜ್ಜಿ ಕೆಸರಾಗಿ  ||

ಅತ್ತರ ಅಲಲೆವ್ವ ಈ ಮುತ್ತ ನನಗಿರಲಿ
ಕೆಟ್ಟರ ಕೆಡಲಿ ಮನಿಗೆಲಸ |
ಸಮರ್ಥನಂಥ ಮಕ್ಕಲಿರಲೆವ್ವ ಮನಿಯಾಗ  ||

ಅಕಿ ನನ್ನ ಶಿವಾನಿ ಮಾತೀಲಿ ಶ್ಯಾನ್ಯಾಕಿ
ಮಾತ ಮಾತೀಗಿ ನಗುವಾಕಿ | ಶಿವಾನಿ
ಮಾತ ಬಲ್ಲವರ ಮಗಳವ್ವ  ||

ಅತ್ತರ ನನ ಕಂದನ ಮುತ್ತೆಲ್ಲಿ ಉದರ್ಯಾವ
ಸತ್ತೀಗಿ ಮಾನೆದ ಹೊಲದಾಗ |
ಅವರನ್ನ ಸುಪ್ಪಲಿ ಒಯ್ದ ಬಳತಂದ  ||

ಅತ್ತ ಕಾಡವನಲ್ಲ ಮತ್ತ ಬೇಡವನಲ್ಲ
ಮೆತ್ತನ್ನ ಎರಡು ಕೈ ಮುಟಗಿ (ಸ್ಯಾಂಡ್ವಿಚ್) ಕೊಟ್ಟರೆ
ಗಪ್ಪುಚಿಪ್ಪಾಗಿ ಮಲಗ್ಯಾನ  ||

ಯಾತರ್ಯಾತರ ಗಾಳಿ ಎಳೆಯ ತೋಟದ ಗಾಳಿ
ಸುತ್ತಲೂ ಗಾಳಿ ಸುಳಿಗಾಳಿ | ನನ ಕಂದನ
ನಿನ್ನ ತೊಟ್ಟಿಲ ಗಾಳಿ ಮನೆತುಂಬಾ  ||

ಅಳಬುರುಕ ಗಿಳುಬುರುಕ ಇದ ಎಂಥ ಮಗನವ್ವ
ಉಣಗೊದದ ರೊಟ್ಟಿ ಸುದಗೊದದ | ನನ ಮಗನ
ಎತ್ತಿ ಕೊಲ್ಲವರು ಯಾರಿಲ್ಲ  ||

ಮಾಳಿಗೆ ಮನೆ ಬೇಕ ಜೋಳಿಗೆ ಹಣ ಬೇಕ
ರಾಮದೇವರಂತ ಮಗ ಬೇಕ |
ನಮ್ಮನಿಗೆ ಜಾನಕಿಯಂತ ಸೊಸೆ ಬೇಕು  ||

ಉಪ್ಪರಿಗೆ ಮನೆ ಬೇಕ ಕೊಪ್ಪರಿಗೆ ಹಣ ಬೇಕ
ಕೃಷ್ಣದೇವರಂತ ಮಗ ಬೇಕ | ನನ ಸಮರ್ಥ
ನಮ್ಮನಿಗೆ ರುಕ್ಮಿಣಿಯಂತ ಸೊಸೆ ಬೇಕ  ||

ಸಂಗಮಕ ಹೋಗಾಕ ಸಂಗಾಟ ಮಗ ಬೇಕ
ತಂಬಿಗಿ ಹಿಡಿಯಾಕ ಸೋಸಿ ಬೇಕ |
ಕೂಡಲ ಸಂಗಮಕ ಹೋಗಿ ಬರಬೇಕ ||

ಬಾಲಕರಿಲ್ಲದ ಬಾಲಿದ್ಯಾತರ ಜನ್ಮ
ಬಾಡಿಗಿ ಎತ್ತು ದುಡಿಧಂಗ |
ಬಾಳೆಲಿ ಹಾಸುಂದ ಬೀಸಿ ಒಗೆಧಂಗ ||

ಹಸುಮಕ್ಕಳಾಡಿದರೆ ಹಸನವ್ವ ಅಂಗಳ
ದೆಸೆ ಮುಖದವನು ನನ ಕಂದ | ಆಡಿದರೆ

ತಾಯಿಲ್ದ ಮಕ್ಕಳಿಗೆ ಬಾಯಿಲ್ಲ ಸಿರಿಯಿಲ್ಲ
ಬಾ ಎಂದು ಕರಿವಾರು ಯಾರಿಲ್ಲದಾಯ್ತೆ ಅಬ್ಬಯ್ಯ
ಹಾಲ ಕುಡಿಸುವರ‍್ಯಾರು ಅನ್ನ ಉಣಿಸುವರ‍್ಯಾರು
ಓಡಿ ನಾವು ಬೀಳಾಲು ಎತ್ತುವರ‍್ಯಾರು ಅಬ್ಬಯ್ಯ  ||

ಕೂಸು ಇದ್ದ ಮನಿಗೆ ಬೀಸಣಿಕೆ ಯಾತಕ
ಕೂಸು ಕಂದಮ್ಮ ಒಳ-ಹೊರಗ
ಕೂಸು ಕಂದಮ್ಮ ಒಳ-ಹೊರಗ ಆಡಿದರ
ಬೀಸಣಿಕೆ ಗಾಳಿ ಸುಳಿದಾವ  ||

ಬೆಳಗಾಗಿ ನೆನೆದ್ದು ಯಾರ್ ಯಾರ ನೆನೆಯಾಲಿ
ಎಳ್ಳು ಜೀರಿಗೆ ಬೆಳಿಯೋ ಭೂಮಿತಾಯಿ
ಎದ್ದೊಂದು ಗಳಿಗೆ ನೆನೆದೇನು  ||

ತೊಟ್ಟಿಲ ಹೊತ್ಕೊಂಡು ತವರ್ಬಣ್ಣ ಉಟ್ಕೊಂಡು
ಅಪ್ಪ ಕೊಟ್ಟೆಮ್ಮೆ ಹೊಡ್ಕೊಂಡು! ತೌರೂರ
ತಿಟ್ಟಹತ್ತಿ ತಿರುಗಿ ನೋಡ್ಯಾಳೋ  ||

ಹೆಣ್ಣುಮಕ್ಕಳ ಕಳುಹಿ ಹೆಂಗಿದಿ ನನ ಹಡೆದವ್ವಾ
ಹನ್ನೆರಡಂಕನ ಪಡೆಸಾಲಿ
ಹನ್ನೆರಡು ಅಂಕನ ಪಡಸಾಲಿ ಒಳ ಹೊರಗ
ಹೆಣ್ಣು ಮಕ್ಕಳ ಉಲವಿಲ್ಲ  ||

ಆಡಿ ಬಾ ನನ ಕಂದ
ಅಂಗಾಲ ತೊಳದೇನ
ತೆಂಗಿನ ಕಾಯಿ ತಿಳಿ ನೀರು
ತೆಂಗಿನ ಕಾಯಿ ತಿಳಿ ನೀರ ತಕ್ಕೊಂಡು
ಕಂದಮ್ನ ಪಾದ ತೊಳದೇನ...||

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...