ಕುವೆಂಪು ವಿರಚಿತ ಶೂದ್ರತಪಸ್ವಿ ನಾಟಕದ ವಿಮರ್ಶೆ shudrathapaswi drama by Kuvempu


ಶೂದ್ರ ತಪಸ್ವಿ ಕುವೆಂಪುರವರ ಪ್ರಸಿದ್ಧ ನಾಟಕ ಕೃತಿ. ಮೂಲ ರಾಮಾಯಣದ ಕಥೆ ಆಧರಿಸಿ ಅಲ್ಪ, ಸ್ವಲ್ಪ ಬದಲಾವಣೆಗಳೊಂದಿಗೆ ಈ ನಾಟಕವನ್ನು ಸಿದ್ದಪಡಿಸಲಾಗಿದೆ. ಗುಣಕ್ಕೆ ಮಾತ್ಸರ್ಯ ಇರಬಾರದು. ಒಳ್ಳೆಯದು ಎಲ್ಲಿದ್ದರೂ ಅದನ್ನು ಗೌರವಿಸ ಬೇಕೆಂಬ ತತ್ವ್ತದ ಅಡಿಯಲ್ಲಿ ನಾಟಕ ರೂಪುಗೊಂಡಿರುವುದನ್ನು ಕಾಣಬಹುದಾಗಿದೆ.

ಶೂದ್ರ ತಪಸ್ವಿ, ವಸ್ತು ವಿಷಯ

  • ರಾಮಾಯಾಣದ ಉತ್ತರಾಕಾಂಡದಲ್ಲಿ ಬರುವ ಪ್ರಕ್ಷಿಪ್ತ ಭಾಗದಲ್ಲಿ ಬರುವ ಕಥೆ. ಶಂಬೂಕ ವಧಾ ಪ್ರಸಂಗ.
  • ರಾಮನು ರಾಜ್ಯಭಾರ ಮಾಡುವ ಸಂದರ್ಭದಲ್ಲಿ ಒಮ್ಮೆ ಬ್ರಾಹ್ಮಣನ ಮಗನು ಸತ್ತು ಹೋಗುತ್ತಾನೆ. ಇದಕ್ಕೆ ಕಾರಣ ಶೂದ್ರನೊಬ್ಬ ತಪಸ್ಸು ಮಾಡುವುದು ಎಂದು ಬ್ರಾಹ್ಮಣ ರಾಮನ ಬಳಿ ಬಂದು ಆರೋಪಿಸಿ ರಾಮರಾಜ್ಯದಲ್ಲಿ ತನ್ನ ಮಗು ಅಕಾಲಿಕ ಮರಣಕ್ಕೆ ತುತ್ತಾಗಿರುವುದರಿಂದ ನ್ಯಾಯ ಕೊಡಬೇಕೆಂದು ಪರಿಪರಿಯಾಗಿ ಬೇಡುತ್ತಾನೆ. ರಾಮ ಬ್ರಾಹ್ಮಣನ ಮನವೊಲಿಸಲು ಪ್ರಯತ್ನಿಸಿ ಸೋಲುತ್ತಾನೆ.
  • ಕಡೆಗೆ ಶೂದ್ರ ತಪಸ್ವಿ ತಪಸ್ಸು ಮಾಡುವ ಜಾಗಕ್ಕೆ ಬ್ರಾಹ್ಮಣನೊಂದಿಗೆ ರಾಮನೂ ಬಂದು, ಅವನ ಮನಸ್ಸಿನ ಸಮಾಧಾನಕ್ಕೋಸ್ಕರ ಶೂದ್ರ ತಪಸ್ವಿಯನ್ನು ಸಂಹರಿಸಲು ಮುಂದಾಗಿ ಬಾಣವನ್ನು ಹೂಡುತ್ತಾನೆ. ಆದರೆ ಆ ಭಾಣ ಶೂದ್ರ ತಪಸ್ವಿಯನ್ನು ಪ್ರದಕ್ಷಿಣೆ ಹಾಕಿ, ಬ್ರಾಹ್ಮಣನನ್ನು ಕೊಲ್ಲಲು ಧಾವಿಸಿದಾಗ, ಬ್ರಾಹ್ಮಣ ಕಂಗಾಲಾಗುತ್ತಾನೆ. ನಂತರ ರಾಮನ ಅನುಜ್ಞೆಯಂತೆ ಶೂದ್ರ ತಪಸ್ವಿಗೆ ವಂದಿಸುತ್ತಾನೆ. ತನ್ನ ಪ್ರಾಣ ಮತ್ತು ಮಗುವಿನ ಪ್ರಾಣ ಎರಡನ್ನು ಕಾಪಾಡಿಕೊಳ್ಳುತ್ತಾನೆ.

ಶೂದ್ರ ತಪಸ್ವಿ ೧೯೪೪ರಲ್ಲಿ ಕುವೆಂಪು ರಚಿಸಿದ ‘ಶೂದ್ರ ತಪಸ್ವಿ’ ನಾಟಕಕ್ಕೆ ರಾಮಾಯಣದ ಒಂದು ತುಣುಕನ್ನು ಕಥೆಯಾಗಿ ಆಯ್ದುಕೊಂಡಿದ್ದಾರೆ. ಶೂದ್ರ ತಪಸ್ವಿ ನಾಟಕ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಬಹುಮುಖ್ಯವಾಗಿದ್ದು ಶೋಷಿತರ ಗಟ್ಟಿದನಿಯಾಗಿ ಹೊರಹೊಮ್ಮುತ್ತಲೇ ಅಂದಿನ ಮೇಲ್ವರ್ಗದ ಘಟಾನುಘಟಿ ಸಾಹಿತಿ, ಟೀಕಾಕಾರರ ವಾಗ್ಧಾಳಿ ಮತ್ತು ಅಸಡ್ಡೆಗಳನ್ನು ಧೂಳಿಪಟ ಮಾಡಿ ಒಂದು ಅದ್ಭುತ ಕೃತಿಯಾಗಿ, ಕೆಳವರ್ಗದ ಜನತೆಯ ಆತ್ಮಸ್ಥೈರ್ಯವಾಗಿ ನಿಂತಿದೆ.

ಶೂದ್ರ ಶಂಬೂಕನ ತಲೆ ಉರುಳಿಸುವ ಮೂಲ ರಾಮಾಯಣ: ಮೂಲ ರಾಮಾಯಣ ಕಾವ್ಯದಲ್ಲಿ ಶ್ರೀರಾಮ ಸೀತೆಯನ್ನು ಕಾಡಿಗಟ್ಟಿದ ನಂತರ ವೃದ್ದ ಬ್ರಾಹ್ಮಣನೊಬ್ಬ ತನ್ನ ಮೃತ ಬಾಲಕನನ್ನು ಹೊತ್ತು ತಂದು ರಾಮನ ಅರಮನೆಯ ಮುಂದೆ ಗೋಳಿಡುತ್ತಾನೆ. ರಾಮ ರಾಜ್ಯದಲ್ಲಿ ಶೂದ್ರ ಶಂಬೂಕನು ತಪಸ್ಸು ಮಾಡುತ್ತಿರುವುದರಿಂದಲೇ ತನ್ನ ಮಗನಿಗೆ ಸಾವುಂಟಾಗಿದೆ ಎನ್ನುತ್ತಾನೆ. ರಾಮ ಶೂದ್ರ ಶಂಬೂಕನನ್ನು ಹುಡುಕಿ ತನ್ನ ಖಡ್ಗದಿಂದ ಶಂಬೂಕನ ತಲೆ ಕಡಿಯುತ್ತಾನೆ. ಈ ಕಾರ್ಯವನ್ನು ಗಮನಿಸಿ ಇಂದ್ರಾದಿಗಳೆಲ್ಲಾ ರಾಮನ ಧರ್ಮಪಾಲನೆಗಾಗಿ ಮನಮೆಚ್ಚಿ, ರಾಮನಿಗೆ ವರ ನೀಡುತ್ತಾರೆ. ರಾಮ ಆ ವರದಿಂದ ಸತ್ತಿರುವ ಬ್ರಾಹ್ಮಣ ಬಾಲಕನನ್ನು ಬದುಕಿಸಿಕೊಳ್ಳುತ್ತಾನೆ.

ಶೂದ್ರ ತಪಸ್ವಿಯ ಹಿಂದಿರುವ ಸೃಜನಶೀಲ ಪ್ರತಿಭೆ: ಕುವೆಂಪು ಮೂಲ ರಾಮಾಯಣದಲ್ಲಿರುವ ರಾಮನನ್ನು ಜೀವ-ವಿರೋಧಿ ಮನೋಗುಣದಿಂದ ಶೂದ್ರ ತಪಸ್ವಿಯಲ್ಲಿ ಬಿಡುಗಡೆಗೊಳಿಸಿ ರಾಮ ಮತ್ತು ಬ್ರಾಹ್ಮಣನ ಮನ:ಪರಿವರ್ತನೆಗೊಳಿಸುತ್ತಾರೆ. ಮೃತ್ಯುವನ್ನು ಅಥವಾ ಮನುಷ್ಯ-ವಿರೋಧಿ ಧರ್ಮವನ್ನು ಮನುಷ್ಯ ಧರ್ಮ ಗೆಲ್ಲಬೇಕು ಎಂಬ ನಾಟಕ ಆಶಯ ಭಿತ್ತಿಗೊಳ್ಳುತ್ತದೆ. ಕುವೆಂಪು ಜಾತಿಯ ವಿಷ ಬೀಜ ಬಿತ್ತುವ ಮೂಲ ರಾಮಾಯಣಕ್ಕೆ ವಿಶ್ವಪಥದ ಉಸಿರು ತುಂಬುತ್ತಾರೆ. ನಾಟಕದ ಪ್ರಮುಖ ಮೂರು ದೃಶ್ಯಗಳಲ್ಲಿ ಮೊದಲಿಗೆ, ಮೃತ್ಯುವು ಕೂಡ ಒಂದು ಪಾತ್ರವಾಗಿ ಬರುವ, ಅರಣ್ಯ ಕಾಯುವ ವೃಕ್ಷ ಭೈರವನೊಂದಿಗೆ ಸಂಘರ್ಷಿಸುವ ದೃಶ್ಯ ರೋಚಕವಾಗಿ ಮೂಡಿಬಂದಿದೆ. ಶೂದ್ರ ಶಂಬೂಕ ಋಷಿಯು ತಪಸ್ಸು ಮಾಡುತ್ತಿರುವ ಅರಣ್ಯದೊಳಕ್ಕೆ ಪ್ರವೇಶಿಸುವ ಮೃತ್ಯುವನ್ನು ಅರಣ್ಯ ರಕ್ಷಕ ತಾನೆಂದು ಅಪ್ಪಣೆಯಿಲ್ಲದೆ ಪ್ರವೇಶಿಸಕೂಡದೆಂದು ವೃಕ್ಷ ಭೈರವ ತಡೆಯುತ್ತಾನೆ. ಶೂದ್ರ ತಪಗೈಯುತ್ತಿರುವುದು ಅಧರ್ಮವೆಂಬಂತೆ ಬ್ರಾಹ್ಮಣ ಬಾಲಕ ಅದನ್ನು ನೋಡಿರುವುದರಿಂದ ಮೃತ್ಯುವು ಒಳಹೋಗುವುದು ಅನಿವಾರ್ಯವೆನ್ನುತ್ತಾ ಮೆಲ್ಲ ಮೆಲ್ಲನೆ ಕರಿಮಂಜಾಗಿ ಆಶ್ರಮದ ಕಡೆ ಚಲಿಸುತ್ತದೆ. ಭೈರವನಿಗೆ ರೋಷವುಕ್ಕಿ ‘ಶಿವ ಶಿವಾ! ಏನ್ ಭಯಂಕರಂ ಪಾಪಂ, ಶ್ರೀರಾಮನಾಳು ತಿರ್ಪ್ಪೀ ಧರ್ಮರಾಜ್ಯದೊಳ್!’ ಎಂದು ಹಲುಬುತ್ತಾನೆ. ಎರಡನೆಯ ದೃಶ್ಯದಲ್ಲಿ ಬ್ರಾಹ್ಮಣನೊಬ್ಬ ರೋದಿಸುತ್ತಾ ಶ್ರೀ ರಾಮಚಂದ್ರನ ಅಯೋಧ್ಯೆಯ ಬಳಿಯ ಉದ್ಯಾನವನದಲ್ಲಿ, ಮಗನ ದುರ್ಮರಣ ರಾಮರಾಜ್ಯದಲ್ಲಿ ಅಧರ್ಮವನ್ನು ಹುಟ್ಟು ಹಾಕುತ್ತಿದೆ ಎಂದು ಬೊಬ್ಬಿಡುತ್ತಾನೆ. ಅಲ್ಲಿಗೆ ಬರುವ ರಾಮ ಬ್ರಾಹ್ಮಣನನ್ನುದ್ದೇಶಿಸಿ ‘ನೀಂ ಏನಾದೊಡಂ ಅಪೂಜ್ಯಗೆಯ್ದಿರೇನ್’ ಎಂದಾಗ ಬ್ರಾಹ್ಮಣ ಹೆದರಿ ತೊದಲುತ್ತಾ, ಈ ಅಪರಾಧಕ್ಕೆ ಮೂಲ ರಾಮನೇ ಎನ್ನುತ್ತಾನೆ. ಶೂದ್ರ ತಪಸ್ವಿಯ ದರ್ಶನದ ಫಲವಾಗಿ ನನ್ನ ಮಗನಿಗೆ ಮರಣ ಉಂಟಾಗಿದೆ ಎನ್ನುತ್ತಾನೆ. ರಾಮರಾಜ್ಯದಲ್ಲಿ ತಪಸ್ಸು, ವೇದಾಧ್ಯಯನ, ದರ್ಶನ ಎಲ್ಲವೂ ತನ್ನ ವರ್ಗಕ್ಕೆ ಮಾತ್ರ ಮೀಸಲು, ಶೂದ್ರ ತಪಸ್ಸು ಒಂದು ಅಧರ್ಮ ಎನ್ನುವುದು ಬ್ರಾಹ್ಮಣನ ಅಭಿಪ್ರಾಯ. ಕುವೆಂಪುರವರ ರಾಮ ಬ್ರಾಹ್ಮಣನ ಮಾತಿಗೆ ಪ್ರತ್ಯುತ್ತರವನ್ನು ಮನಸ್ಸಿನಲ್ಲಿ ಯೋಚಿಸುತ್ತಾನೆ: “ವರ್ಣಗರ್ವಾಂಧಂಗೆ ಈ ಶಾಸ್ತ್ರ ಮೂರ್ಖಂಗೆಂತು ಬುದ್ದಿಗಲಿಪೆನ್!’. ಅವನ ಒಡಗೂಡಿ ಪುಷ್ಪಕ ವಿಮಾನವೇರಿ ಹೊರಡುತ್ತಾನೆ. ಮೂರನೆಯ ದೃಶ್ಯದಲ್ಲಿ, ಮಹಾತಪ್ಪಸ್ಸಿನಲ್ಲಿರುವ ಶಂಬೂಕ ಮಹರ್ಷಿ ಆಶ್ರಮಕ್ಕೆ ಶ್ರೀರಾಮ, ಬ್ರಾಹ್ಮಣನ ಪ್ರವೇಶವಾಗುತ್ತದೆ. ತಪೋಗುಣ, ಶಾಂತಿನೆಲೆಸಿರುವ ವಾತಾವರಣ ಕಂಡು ಶ್ರೀರಾಮ ಭಾವಪರವಶನಾಗಿ ಶಂಬೂಕ ಋಷಿಗೆ ಶ್ರೀರಾಮ ಕೈಮುಗಿಯುತ್ತಿದ್ದರೆ, ರೋಷವುಕ್ಕಿದ ಬ್ರಾಹ್ಮಣ ರೋದಿಸುವ ನಾಟಕವಾಡುತ್ತಾ ಶಂಬೂಕನ ಶಿರಚ್ಛೇದ ಮಾಡಬೇಕೆಂದು ಅಲವತ್ತು ಮಾಡುತ್ತಾನೆ. ರಾಮ ಬ್ರಾಹ್ಮಣನಿಗೆ ಕೆಲ ಪ್ರಶ್ನೆ ಹಾಕುತ್ತಾನೆ: ತಪಸ್ಸುಗೈಯುವವನು ಪೂಜ್ಯನಲ್ಲವೇ? ಈ ತಪಸ್ವಿಯಂ ಕೊಲ್ವುದುಂ ಪಾಪಮಾಗದೆ? ಅದಕ್ಕೆ ಬ್ರಾಹ್ಮಣ ‘ನಾಯಿಯ ಹಾಲಿಗೆ ಈ ಶೂದ್ರನ ತಪಸ್ಸು ಸಮ’ ಎಂದಾಗ ರಾಮ ವ್ಯಂಗ್ಯದಿಂದ ‘ಸಾರ್ಥಕವಾಯ್ತು ನೀ ಕಲಿತ ವಿದ್ಯೆ ಆಚಾರ್‍ಯ’ ಎನ್ನುತ್ತಾನೆ. ಬ್ರಾಹ್ಮಣನನ್ನು ಸಂತೈಸಲು ರಾಮ ಶಸ್ತ್ರ ಹೂಡಲು ನಿರ್ಧರಿಸಿದಾಗಲೂ, ತೊಡುವುದಿದ್ದರೆ ಬ್ರಹ್ಮಾಸ್ತ್ರವನ್ನೇ ತೊಡಬೇಕು ಎಂದು ಬ್ರಾಹ್ಮಣ ಪಟ್ಟು ಹಾಕುತ್ತಾನೆ. ಕುವೆಂಪು ರಾಮನ ಜಿಜ್ಞಾಸೆಯನ್ನು ಇಲ್ಲಿ ಪರಿಹರಿಸುವ ಪರಿಯೇ ವಿಶಿಷ್ಟ. ತಾನು ಹೂಡುವ ಬ್ರಹ್ಮಾಸ್ತ್ರ ಅಧರ್ಮದ ವಿರುದ್ದ ಹೋರಾಡಲಿ ಎನ್ನುತ್ತಾ ರಾಮ ಶಸ್ತ್ರ ಹೂಡುತ್ತಾನೆ. ಬ್ರಹ್ಮಾಸ್ತ್ರವು ಶಂಬೂಕ ತಪಸ್ವಿಯ ಬಳಿ ತೆರಳಿ ತಪೋಮಹಿಮೆಗೆ ನಮಿಸುತ್ತದೆ. ನಂತರ ಬ್ರಾಹ್ಮಣನೆಡೆಗೆ ತಿರುಗಿ ಧಾವಿಸತೊಡಗಿದಾಗ ಅಧರ್ಮಿ ಯಾರು ಎಂಬುದು ಬ್ರಾಹ್ಮಣನಿಗೆ ಅರಿವಾಗಿ ರಕ್ಷಣೆಗಾಗಿ ಬೊಬ್ಬಿಡುತ್ತಾನೆ. ಅಂತಿಮವಾಗಿ ಬ್ರಹ್ಮಾಸ್ತ್ರವನ್ನು ಹಿಂಪಡೆಯುವ ವೇಳೆಗೆ ಬಾಲಕ ಬ್ರಾಹ್ಮಣನನ್ನು ಹುಡುಕುತ್ತಾ ಬರುತ್ತಾನೆ. ತನ್ನ ತಾತನೊಂದಿಗೆ ಹೂವು ತರಲು ಕಾಡಿಗೆ ಬಂದ ತಾನು ಮೂರ್ಛೆ ಹೋಗಿ ಪ್ರಜ್ಞೆ ಬರುವಷ್ಟರಲ್ಲಿ ದಾರಿ ತಪ್ಪಿದೆ ಎನ್ನುತ್ತಾನೆ ಬಾಲಕ. ಬಾಲಕ ಮತ್ತು ಬ್ರಾಹ್ಮಣರಿಬ್ಬರು ಶೂದ್ರ ಶಂಬೂಕ ತಪಸ್ವಿಗೆ ನಮಿಸುವ ದೃಶ್ಯದೊಂದಿಗೆ ನಾಟಕ ಮುಕ್ತಾಯಗೊಳ್ಳುತ್ತದೆ. ಮೂಲ ರಾಮಾಯಣದಲ್ಲಿ ಶೂದ್ರ ಶಂಬೂಕನ ಮೇಲೆ ಧಾಳಿ ಮಾಡಿ ಜೀವ-ವಿರೋಧಿಯಂತೆ ರಾಮ ಅವನನ್ನು ಕೊಂದಿದ್ದರೆ, ಇಲ್ಲಿ ಕುವೆಂಪುರವರ ರಾಮ ಜೀವ-ಪರನಂತೆ, ಸತ್ಯದ ಅಸ್ತ್ರವಿಡಿದು ಮನ:ಪರಿವರ್ತನೆಗೆ ಸಾಕ್ಷಿಯಾಗುತ್ತಾನೆ.

ಶೂದ್ರತಪಸ್ವಿಯಲ್ಲಿ ಬರುವ ಧಾರ್ಮಿಕ ವಿಚಾರಶೀಲತೆ. ಇಲ್ಲಿ ಬ್ರಾಹ್ಮಣ –ಶೂದ್ರ ಪ್ರಜ್ಞೆಗಳು ಧರ್ಮಾಧರ್ಮದ ಪ್ರಶ್ನೆಯಾಗಿ ರಾಮನಿಗೆ ಉಧ್ಭವಿಸುತ್ತವೆ. ಇದನ್ನು ಅರಿತ ರಾಮ, ಬ್ರಾಹ್ಮಣನಿಗೆ ತಮ್ಮ ಮೇಲು ಕೀಳುಗಳ ಅಹಮಿಕೆಯ ಅರಿವೆಯನ್ನು ಮನವರಿಕೆಯಾಗುವಂತೆ ಮಾಡುತ್ತಾನೆ. ಇಲ್ಲಿ ಬ್ರಾಹ್ಮಣ ಮತ್ತು ಶಂಬೂಕ ಇಬ್ಬರ ಘನತೆ, ಧರ್ಮದ ಔನತ್ಯ ಮಾತು ಶ್ರೀ ರಾಮನ ಮಹೋನ್ನತ ವ್ಯಕ್ತಿತ್ವ ಏಕಕಾಲಕ್ಕೆ ಅನಾವರಣವಾಗುವಂತೆ ಕುವೆಂಪುರವರು ವ್ಯಾಖ್ಯಾನಿಸುವ ರೀತಿಯಲ್ಲಿ ಅವರ ವೈಚಾರಿಕತೆ ಹೊಮ್ಮುತ್ತದೆ.

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...