ಅಲ್ಲಮಪ್ರಭು ೧೨ನೆಯ ಶತಮಾನದ ವಚನಕಾರರಲ್ಲಿ ಪ್ರಸಿದ್ಧನಾದವರು. ಅತ್ಯಂತ ನೇರ ನಿಷ್ಠುರವಾದಿ. ಅನೇಕ ಶಿವಶರಣ, ಶಿವಶರಣೆಯರಿಗೆ ಭಕ್ತಿ-ವೈರಾಗ್ಯವನ್ನು ಬೋಧಿಸಿದರು. ತನ್ನ ವಚನಗಳ ಮೂಲಕ ಅಂತರಂಗ, ಬಹಿರಂಗಗಳನ್ನು ಶೋಧಿಸಲೆತ್ನಿಸಿದರು.
ಅಲ್ಲಮಪ್ರಭು ಅವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪೂರ ತಾಲೂಕಿನ ಬಳಿಗಾವೆ ಎಂಬಲ್ಲಿ ಒಂದು ರಾಜ ಮನೆತನದಲ್ಲಿ ಜನಿಸಿದರು. ಅಲ್ಲಮಪ್ರಭು ತಾವು ಯುವಕರಿದ್ದಾಗ ಕಾಮಲತೆ ಎಂಬ ಯುವತೆಯನ್ನು ಮದುವೆಯಾದರು ಆದರೆ ಅವರು ಅಕಾಲಿಕವಾಗಿ ಲಿಂಗೈಕ್ಯರಾದರು. ತನ್ನ ಮಡದಿಯನ್ನು ಕಳೆದುಕೊಂಡು ಅಲ್ಲಮ ಮರುಳನಂತೆ ಅಲೆಯುತ್ತಾ, ತಿರುಗುತ್ತಿರುವಾಗ ಒಂದು ಗುಹೆಯನ್ನು ಪ್ರವೇಶಿಸುತ್ತಾರೆ ಅಲ್ಲಿ ಒಬ್ಬ ಯೋಗಿ ಅನಿಮಿಷ ದೇವ ಗುರುವಿನ ಪರಿಚಯವಾಗುತ್ತೆ. ಅಲ್ಲಿ ಆ ಗುರು ಅಲ್ಲಮನಿಗೆ ಒಂದು ಲಿಂಗ ಕೊಟ್ಟು ತನ್ನ ಎಲ್ಲಾ ಜ್ಞಾನವನ್ನು ಧಾರೆಯೆರೆಯುತ್ತಾರೆ. ಆ ಗುಹೆಯಲ್ಲಿ ಅಲ್ಲಮ ಜ್ಞಾನೋದಯವಾಗಿ ಅಲ್ಲಮಪ್ರಭುವಾಗಿ ಬದಲಾಗುತ್ತಾರೆ.
12 ನೆಯ ಶತಮಾನದ ಕರ್ನಾಟಕದ ಮಹತ್ಸಾಧನೆಯ ಇತಿಹಾಸದಲ್ಲಿ ಬಹಳ ಪ್ರಮುಖ ವ್ಯಕ್ತಿ. ಬಸವಣ್ಣನವರ ನೇತೃತ್ವದಲ್ಲಿ ಧಾರ್ಮಿಕ ಕ್ರಾಂತಿಯ ಒಂದು ಮಹಾಪ್ರವಾಹ ಉಕ್ಕಿ ಹರಿದು ಜೀವನದ ಎಲ್ಲ ರಂಗಗಳನ್ನೂ ವ್ಯಾಪಿಸಿತಷ್ಟೆ. ನಾಡಿನ ನಾನಾ ಭಾಗಗಳಿಂದ ಬಂದ ನೂರಾರು ಶರಣರು ಕಲ್ಯಾಣ ಪಟ್ಟಣದಲ್ಲಿ ಸೇರಿದ್ದರು. ಕಳಚುರಿ ಬಿಜ್ಜಳನ ಬಳಿ ದಂಡಾಧೀಶರಾಗಿದ್ದ ಬಸವಣ್ಣನವರ ಮಾರ್ಗದರ್ಶನದಲ್ಲಿ ಸ್ವತಂತ್ರ ವಿಚಾರಮಥನದಿಂದ ಮೂಡಿಬಂದ ಹೊಸ ಬೆಳಕನ್ನು ಜನತೆಯಲ್ಲಿ ಬೀರಿದರು. ಆ ಶರಣರ ಅನುಭಾವಗೋಷ್ಠಿಯಲ್ಲಿ ಅಗ್ರಪೀಠವಹಿಸಿ ವಿಚಾರಮಥನಕ್ಕೆ ಕಾರಣವಾಗುತ್ತಿದ್ದ ಮಹಾವ್ಯಕ್ತಿ ಅಲ್ಲಮಪ್ರಭು. ಬಸವಣ್ಣನವರ ವಿಚಾರಕ್ರಾಂತಿಗೆ ಈತ ಬೆನ್ನೆಲುಬಾಗಿ ನಿಂತು, ತನ್ನ ಜ್ಞಾನ ವೈರಾಗ್ಯಗಳ ಕಾಂತಿಯನ್ನಿತ್ತು ಅದನ್ನು ಮುನ್ನಡೆಸಿದ. ಬಸವ ಅಲ್ಲಮರಿಬ್ಬರೂ ಆ ಯುಗದ ಮಹಾಶಕ್ತಿಗಳು.
ಇಂದಿನ ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಹಳ್ಳಿಯಾಗಿ ಉಳಿದಿರುವ ಬಳ್ಳಿಗಾವೆ ಅಲ್ಲಮನ ಜನ್ಮಸ್ಥಳ. ತಂದೆಯ ಹೆಸರು ನಿರಹಂಕಾರ, ತಾಯಿ ಸುಜ್ಞಾನಿ. ಇವು ತಂದೆ ತಾಯಿಗಳ ನಿಜವಾದ ಹೆಸರುಗಳೋ ನಿರಹಂಕಾರ ಸುಜ್ಞಾನಗಳಿಂದ ಮಾತ್ರ ಅಲ್ಲಮಪ್ರಭುವಿ ನಂಥ ವ್ಯಕ್ತಿತ್ವ ಮೂಡಬಲ್ಲುದೆಂಬುದರ ಸಾಂಕೇತಿಕ ಸೂಚನೆಯೋ ತಿಳಿಯದು. ಅಂತೂ ಪ್ರಭುದೇವನ ತಂದೆ ಬಳ್ಳಿಗಾವೆಯಲ್ಲಿ ನಾಗವಾಸಾಧಿಪತಿಯಾಗಿದ್ದನೆಂಬ ಮಾತು ಬರುತ್ತದೆ. ಇವನ ಬಾಲ್ಯಜೀವನದ ಪರಿಸರಗಳಾಗಲಿ ಮನೋವಿಕಾಸದ ಚಿತ್ರವಾಗಲಿ ದೊರೆಯದು. ಆದರೆ ಈತನ ಜೀವನದಲ್ಲೊಂದು ಪರಿವರ್ತನೆಯ ಘಟ್ಟ ತಾರುಣ್ಯದಲ್ಲಿ ಪ್ರಾಪ್ತವಾದಂತೆ ತೋರುತ್ತದೆ. ಅದು ಹರಿಹರ ಹೇಳುವಂತೆ ಬಳ್ಳಿಗಾವೆಯ ಕಾಮಲತೆಯಿಂದ ಆಗಿರಲಿ ಅಥವಾ ಚಾಮರಸ ಹೇಳುವಂತೆ ಬನವಾಸಿಯ ಮಾಯಾದೇವಿಯಿಂದ ಆಗಿರಲಿ, ಅಂತೂ ಸಂಸಾರವನ್ನು ಮೆಟ್ಟಿ ಮೇಲೇರುವ ಸಾಧನೆಗೆ ಪ್ರಭುವನ್ನು ಪ್ರಚೋದಿಸಿದ ಒಂದು ಘಟನೆ ನಡೆದಿರಬೇಕು. ಅದರಿಂದ ಪ್ರಭುದೇವನಿಗೆ ತನ್ನ ಹೃದಯದ ಅಂತರಾಳದಲ್ಲಿ ಅಡಗಿದ್ದ ಅತೀವವಾದ ಆಕಾಂಕ್ಷೆಯ ಅರಿವು ಆದಂತೆ ತೋರುತ್ತದೆ. ಮುಂದೆ ಈತನ ವಚನಗಳಲ್ಲಿ ನಾವು ಕಾಣುವ ಜ್ಞಾನ ವೈರಾಗ್ಯಗಳು ಮೊದಲಿನಿಂದಲೂ ಈತನ ಜೀವನದಲ್ಲಿ ಉಸಿರಾಟದಂತೆ ಸಹಜವಾಗಿದ್ದುವು. ತನ್ನ ಸಹಜ ಸ್ವರೂಪದ ವಿಕಾಸಕ್ಕಾಗಿ ಹಂಬಲಿಸಿತ್ತು ಪ್ರಭುವಿನ ಮನಸ್ಸು, ಈ ಸಂಸಾರದ ವಿಷಯಸುಖಗಳಲ್ಲಿ ಆನಂದವನ್ನು ಪಡೆಯಲಾರದೆ ಹೋಯಿತು. ಆದುದರಿಂದ ಇದನ್ನು ತ್ಯಜಿಸಿ ಈತ ಅಗಾಧವಾದ ಸಾಧನೆಯನ್ನು ಕೈಕೊಂಡಂತೆ ತೋರುತ್ತದೆ.
೧೨ನೆಯ ಶತಮಾನದ ಶಿವಶರಣರಲ್ಲಿ ಅಲ್ಲಮಪ್ರಭು ಉಚ್ಚಸ್ಥಾನದಲ್ಲಿದ್ದಾನೆ. ಈತನು ಅರಸು ಮನೆತನದಲ್ಲಿಯೆ ಹುಟ್ಟಿ ಬೆಳೆದವನಾದರೂ, ಮನೆ ಬಿಟ್ಟು ತೆರಳಿ ಅಧ್ಯಾತ್ಮಸಾಧಕನಾದನೆಂದು ಹೇಳಲಾಗುತ್ತಿದೆ. ಬಸವಣ್ಣನ ಕಲ್ಯಾಣಕ್ಕೆ ಬಂದ ಅಲ್ಲಮಪ್ರಭು ಅಲ್ಲಿ ಅನುಭವಮಂಟಪದ ಶೂನ್ಯಸಿಂಹಾಸನದ ಅಧ್ಯಕ್ಷನಾಗುತ್ತಾನೆ. ಅಲ್ಲಮನ ವಚನಚಂದ್ರಿಕೆಯಲ್ಲಿ ೧೨೯೪ ವಚನಗಳು ಲಭ್ಯವಾಗಿವೆ. ಅಲ್ಲಮಪ್ರಭು ತನ್ನ ಕೊನೆಯ ದಿನಗಳಲ್ಲಿ ಶ್ರೀಶೈಲಕ್ಕೆ ಹೋಗಿ ಅಲ್ಲಿಯ ವನದಲ್ಲಿ ಶಿವೈಕ್ಯನಾದನೆಂದು ಪ್ರತೀತಿ. ಬಸವಣ್ಣನವರ ಸಮಕಾಲೀನನಾದ ಅಲ್ಲಮಪ್ರಭುವಿನ ವಚನಗಳ ಅಂಕಿತ ‘ಗುಹೇಶ್ವರ’ ಅಥವಾ ‘ಗೊಹೇಶ್ವರ’. ಈತನ ವಚನಗಳಲ್ಲಿ ಗಹನವಾದ ಆಧ್ಯಾತ್ಮ ಹಾಗೂ ತಾತ್ವಿಕ ವಿಚಾರಗಳಿವೆ. ಅಲ್ಲಮನ ಆಧ್ಯಾತ್ಮಿಕ ಅನುಭವಗಳ ಅಸಾಮಾನ್ಯತೆಯಿಂದ ಅವನ ವಚನಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಅವನದು ಬಹುಮಟ್ಟಿಗೆ ರೂಪಕ ಭಾಷೆ. ಈ ಭಾಷೆ ಅವನ ವೈಶಿಷ್ಟ್ಯವೂ ಹೌದು. ಚಾಮರಸನು ತನ್ನ ಪ್ರಭುಲಿಂಗಲೀಲೆ ಎನ್ನುವ ಕಾವ್ಯದಲ್ಲಿ ಅಲ್ಲಮಪ್ರಭುವಿನ ಐತಿಹ್ಯವನ್ನು ವರ್ಣಿಸಿದ್ದಾನೆ.
ಅಲ್ಲಮನ ಜೀವನ ಚರಿತ್ರೆಯನ್ನು ನಿಖರವಾಗಿ ನಿರೂಪಿಸಲು ಸಾಧ್ಯವಾಗಲಾರದೊಷ್ಟು ಐತಿಹ್ಯಗಳು ಆ ವ್ಯಕ್ತಿತ್ವವನ್ನು ಸುತ್ತುವರಿದಿವೆ. ಅಲ್ಲಮನ ಬಗ್ಗೆ ಹದಿಮೂರನೇ ಶತಮಾನದ ಹರಿಹರಮಹಾಕವಿಯು, ಪ್ರಭುದೇವರ ರಗಳೆಯಲ್ಲಿ ಸಾಕಷ್ಟು ವಿವರಣೆಗಳನ್ನು ನೀಡಿರುವನಾದರೂ, ಅಲ್ಲಮನ ಪ್ರಭಾವಲಯದಿಂದ ಪೂರ್ಣವಾಗಿ ಹೊರ ಬಂದು , ಒಂದು ಸಹಜ ಚಿತ್ರಣವನ್ನು ಕೊಡುವಲ್ಲಿ ಹರಿಹರನಂತಹ ವಾಸ್ತವವಾದಿ ಕವಿ ಸಹ ಸೋಲುತ್ತಾನೆ. ಇನ್ನು ಚಾಮರಸನು ಅಲ್ಲಮಪ್ರಭುದೇವನನ್ನು ಈ ಲೋಕದ ಮಾನವ ಚೇತನವೆಂದು ಒಪ್ಪಿಕೊಳ್ಳುವುದೇ ಇಲ್ಲ. ಅವನು ಕೈಲಾಸದಿಂದ ಬಂದ ಶಿವನ ಚಿತ್ಕಳೆ, ಎಂದೇ ಚಿತ್ರಿಸುತ್ತಾನೆ. ಇವರಿಬ್ಬರಲ್ಲದೆ ಎಳಂದೂರು ಹರಿಹರೇಶ್ವರನೆಂಬ ಮತ್ತೊಬ್ಬ ಕವಿಯೂ ಅಲ್ಲಮಪ್ರಭುವಿನ ಬಗ್ಗೆ ಕಾವ್ಯ ರಚನೆ ಮಾಡಿದ್ದಾನೆ. ಇನ್ನು ಚಾಮರಸನು ರಚಿಸಿರುವ ಪ್ರಭುಲಿಂಗಲೀಲೆಯು ತಮಿಳು, ಮರಾಠಿ ಮುಂತಾದ ಭಾಷೆಗಳಿಗೆ ಬಲು ಹಿಂದೆಯೇ ಅನುವಾದಗೊಂಡು ಪ್ರಖ್ಯಾತವಾಗಿದ್ದಿತು .ಈ ಮಹಾಕವಿಗಳಲ್ಲದೆ ,ಅಲ್ಲಮಪ್ರಭುವಿನ ಬಗ್ಗೆ ಪ್ರಾಸಂಗಿಕವಾಗಿ ಬರೆಯದ ವೀರಶೈವ ಸಾಹಿತ್ಯವೇ ಇಲ್ಲವೆನ್ನಬಹುದು. ಇದೆಲ್ಲಕ್ಕಿಂತಲೂ ಮುಖ್ಯವಾಗಿ, ಸ್ವತಃ ಅಲ್ಲಮಪ್ರಭುವೇ ಅತನ ಕಾಲದ ಬಲು ದೊಡ್ಡ ಸಾಹಿತ್ಯಚೇತನವಾಗಿದ್ದನೆನ್ನುವುದು, ಮತ್ತು ಅವನವೇ ಆದ ಅನೇಕ ವಚನಗಳು ಉಪಲಬ್ಧವಿರುವುದು ,ಅವನ ವ್ಯಕ್ತಿತ್ವವನ್ನು ಗ್ರಹಿಸಲು ತುಂಬಾ ಉಪಯುಕ್ತ ಮಾರ್ಗವಾಗಿದೆ .ಇಡಿಯ ವಚನ ಸಾಹಿತ್ಯದಲ್ಲಿಯೇ , ಸಾಹಿತ್ಯದ ಪರಿಭಾಷೆಯನ್ನು ಸರಿಯಾದ ಮಾರ್ಗದಲ್ಲಿ ದುಡಿಸಿಕೊಂಡವರಲ್ಲಿ ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭು ಇಬ್ಬರೂ ಅಪ್ರತಿಮರು .
ಚಾಮರಸನು ಅಲ್ಲಮನ ತಂದೆ ತಾಯಿಗಳನ್ನು ನಿರಹಂಕಾರ-ಸುಜ್ಞಾನಿಗಳೆಂದು ಕರೆಯುತ್ತಾನೆ. ನಂತರ ಮಾಯಾದೇವಿಯ ತಂದೆ ತಾಯಿಗಳನ್ನು ಮಮಕಾರ-ಮೋಹಿನಿಯರೆಂದು ಕರೆಯುವುದನ್ನು ಕಂಡಾಗ ಇವೆಲ್ಲವೂ ವಾಸ್ತವವಲ್ಲದ, ಕವಿಯ ಭಾವನಾತ್ಮಕ ರೂಪಕಗಳೆನಿಸದೆ ಇರದು.
ಹರಿಹರ ಮಹಾಕವಿಯು ಅಲ್ಲಮನ ತಂದೆ ತಾಯಿಗಳ ಹೆಸರುಗಳನ್ನೆ ಪ್ರಸ್ತಾಪಿಸದೆ ಅಲ್ಲಮನ ತಂದೆಯು ಬಳ್ಳಿಗಾವಿಯ ನಾಗವಾಸಾಧಿಪನಾಗಿದ್ದನೆಂದು ವಿವರಿಸುವನು. ನಾಗವಾಸಾಧಿಪನೆಂದರೆ ಅರಮನೆಯ ಅಂತಃಪುರದ ಸಂಗೀತ, ನರ್ತನಗಳ ವಲಯದ ಅಧಿಕಾರಿಯೆಂದೇ ಅರ್ಥ ಬರುವುದರಿಂದ, ಅಲ್ಲಮನು ಒಬ್ಬ ಕಲಾವಿದನ ಮಗನಾಗಿದ್ದನೆಂದು ಭಾವಿಸಬಹುದು ಮತ್ತು ಅಂದಿನ ಕಾಲಮಾನದಲ್ಲಿ ನಟರಿಗೆ, ನಟುವಾಂಗದ ವೃತ್ತಿಯವರಿಗೆ ಸಾಮಾಜಿಕ ಮನ್ನಣೆಯೂ ಇರಲಿಲ್ಲವೆಂಬುದು ಗಮನಾರ್ಹವಾದುದು.
ಅಲ್ಲಮನ ಯೌವ್ವನ ಕಾಲದ ಪ್ರೇಮ, ಕಾಮ, ವ್ಯಾಮೋಹಗಳ ಚಿತ್ರಗಳನ್ನು ಹರಿಹರಮಹಾಕವಿಯೂ , ಚಾಮರಸನೂ ಕಟ್ಟಿ ಕೊಡುವ ರೀತಿಗಳು ತುಂಬಾ ವಿಭಿನ್ನವಾಗಿವೆ. ಅಲ್ಲಮನು ಸಾಕ್ಷಾತ್ ಶಿವಾಂಶ ಸಂಭೂತನಾದುದರಿಂದ, ಕಾಮಾದಿ ಅರಿಷಡ್ವರ್ಗಗಳು ಅವನನ್ನು ಸೋಂಕುವುದೇ ಇಲ್ಲ. ಬನವಾಸೆಯ ಮಧುಕೇಶ್ವರ ಮಂದಿರದಲ್ಲಿ ಶಿವನೆದುರಿನಲ್ಲಿ ಮದ್ದಳೆಯ ಮಹಾ ಯೋಗದಲ್ಲಿ ತಲ್ಲೀನನಾಗಿದ್ದ ಅಲ್ಲಮನನ್ನು ಆ ಊರಿನ ರಾಜನ ಮಗಳು, ಮಾಯಾದೇವಿ ಕಂಡು ವಿಭ್ರಾಂತಿಗೊಳಗಾಗುತ್ತಾಳೆ. ಅವನನ್ನು ಮೋಹಿಸಿ, ಕಾಮಿಸುತ್ತಾಳೆ. ಇಲ್ಲಿ ಚಾಮರಸನ ಪ್ರಕಾರ ಪಾರ್ವತೀ ದೇವಿಯ ಮಾಯೆಯ ಅಂಶವೇ ಅಲ್ಲಮನನ್ನು ಜಯಿಸಲು ಭೂಲೋಕದಲ್ಲಿ ಮಾಯಾದೇವಿಯಾಗಿ, ಮಮಕಾರ, ಮೋಹಿನಿಯರ ಮಗಳಾಗಿ ಜನಿಸಿರುತ್ತಾಳೆ. ಇದನ್ನು ಅರಿತ ಅಲ್ಲಮನು, ಅಂತರ್ಧಾನನಾಗಿ, ಅರಣ್ಯವನ್ನು ಸೇರುತ್ತಾನೆ. ಹಿಂಬಾಲಿಸಿದ ಮಾಯೆಗೆ, ಪರವಶನಾಗದೆ ಶಾಶ್ವತ ನಿಲುವನ್ನು ವಿವರಿಸುತ್ತಾನೆ. ಹೀಗೆ ಇಬ್ಬರು ಮಹಾ ಕವಿಗಳು ಅಲ್ಲಮನನ್ನು ವಿಭಿನ್ನವಾಗಿ ಕಟ್ಟಿ ಕೊಡುತ್ತಾರೆ.