ಕರ್ನಾಟಕ ಏಕೀಕರಣದ ಚಳವಳಿಗೆ ಮೈಸೂರಿನ ಕೊಡುಗೆ ಕಡಿಮೆ ಏನಲ್ಲ. ಮೈಸೂರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಕುವೆಂಪು ಅವರೂ ಕರ್ನಾಟಕ ಏಕೀಕರಣದ ಪರವಾಗಿದ್ದರು. ಅಖಂಡ ಕರ್ನಾಟಕದ ಪ್ರತಿಪಾದಕರಾಗಿದ್ದರು. ಕನ್ನಡಿಗರ ಒಗ್ಗೂಡಿಕೆಯ ಬಗ್ಗೆ ಭಾಷಣ ಮಾಡುತ್ತಿದ್ದರು. ಇದು ಆಗಿನ ಅಧಿಕಾರಸ್ಥರಿಗೆ ಹಿಡಿಸಲಿಲ್ಲ. ಅದಕ್ಕೇ ರಾಜ್ಯ ಸರ್ಕಾರ ಕುವೆಂಪು ಅವರಿಗೆ ನೋಟಿಸ್ ನೀಡಿ, ’ಪ್ರಾಧ್ಯಾಪಕರಾಗಿರುವ ನೀವು ರಾಜಕೀಯ ವಿಷಯ ಕುರಿತು ಹೇಳಿಕೆ ನೀಡಿದ್ದೀರಿ. ಇದಕ್ಕೆ ವಿವರಣೆ ಕೋಡಿ” ಎಂದು ಕೇಳಿತು. ಈ ನೋಟಿಸ್ ಗೆ ಕುವೆಂಪು ಅವರು ಅಖಂಡ ಕರ್ನಾಟಕ ಎಂಬ ಪದ್ಯವನ್ನೇ ಬರೆದು ಕಳಿಸಿದರು.
ಅಖಂಡ ಕರ್ನಾಟಕ
ಅಲ್ತೋ ನಮ್ಮ ಬೂಟಾಟದ ರಾಜಕೀಯ ನಾಟಕ
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ
ಅಖಂಡ ಕರ್ನಾಟಕ
ಅಲ್ತೊ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ
ನೃಪತುಂಗನೇ ಚಕ್ರವರ್ತಿ
ಪಂಪನಲ್ಲಿ ಮುಖ್ಯಮಂತ್ರಿ
ರನ್ನ ಜನ್ನ ನಾಗವರ್ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಶರ
ಸರಸ್ವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ
ಅಲ್ತೋ ನಮ್ಮ ಬೂಟಾಟದ ರಾಜಕೀಯ ನಾಟಕ
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ
ಅಖಂಡ ಕರ್ನಾಟಕ
ಅಲ್ತೊ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ
ನೃಪತುಂಗನೇ ಚಕ್ರವರ್ತಿ
ಪಂಪನಲ್ಲಿ ಮುಖ್ಯಮಂತ್ರಿ
ರನ್ನ ಜನ್ನ ನಾಗವರ್ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಶರ
ಸರಸ್ವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ
ಕರ್ನಾಟಕ ಎಂಬುದೇನು
ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ! ಶಕ್ತಿ ಕಣಾ!
ಬೆಂಕಿ ಕಣಾ! ಸಿಡಿಲು ಕಣಾ!
ಕಾವ ಕೊಲುವ ಒಲವ ಬಲವ
ಪಡೆದ ಚಲದ ಚಂಡಿ ಕಣಾ
ಋಷಿಯ ಕಾಣ್ಬ ಕಣ್ಣಿಗೆ
ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ! ಶಕ್ತಿ ಕಣಾ!
ಬೆಂಕಿ ಕಣಾ! ಸಿಡಿಲು ಕಣಾ!
ಕಾವ ಕೊಲುವ ಒಲವ ಬಲವ
ಪಡೆದ ಚಲದ ಚಂಡಿ ಕಣಾ
ಋಷಿಯ ಕಾಣ್ಬ ಕಣ್ಣಿಗೆ
ಎಂದು ಉತ್ತರಿಸಿದ್ದರು. ಇದು ರಾಜಕಾರಣಿಗಳನ್ನು ಇನ್ನಷ್ಟು ಕೆರಳಿಸಿತು. ಕೆ.ಸಿ.ರೆಡ್ಡಿ ಸಚಿವ ಸಂಪುಟದಲ್ಲಿಯೂ ಈ ಬಗ್ಗೆ ಚರ್ಚೆ ಆಯಿತು. ಕುವೆಂಪು ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಲಾಯಿತು. ಆಗ ಕೆ.ಸಿ. ರೆಡ್ಡಿ ಅವರು ನಿಟ್ಟೂರು ಶ್ರೀನಿವಾಸ್ ರಾಯರ ಬಳಿ ಈ ಬಗ್ಗೆ ಚರ್ಚಿಸಿದಾಗ, ರಾಯರು ’ಕುವೆಂಪು ಕೈ ಎತ್ತಿದರೆ ಇಡೀ ಕರ್ನಾಟಕವೇ ಕೈ ಎತ್ತುತ್ತದೆ. ಅದಕ್ಕಾಗಿ ನೋಟಿಸ್ ವಾಪಸ್ಸು ಪಡೆಯುವುದೇ ಉತ್ತಮ’ ಎಂದು ಸಲಹೆ ನೀಡಿದರು.ಇದು ಮೈಸೂರು ಕರ್ನಾಟಕ ಏಕೀಕರಣದ ನನಸಿಗೆ ಶ್ರಮಿಸಿದ ಪರಿ.
ಈ ಮೇಲಿನ ವಿಚಾರವನ್ನು, ೧೯ ನವೆಂಬರ್ ೨೦೧೭ ರ ಪ್ರಜಾವಾಣಿ ಮುಕ್ತಛಂದ ದಲ್ಲಿ ಪ್ರಕಟಿತವಾದ ರವೀಂದ್ರ ಭಟ್ಟ ಅವರ ’ಚಳುವಳಿಗಳ ತವರಿಗೆ ಮತ್ತೆ ಬಂದಿದೆ ಕನ್ನಡದ ತೇರು” ಎಂಬ ಬರಹದಿಂದ ಆಯ್ದುಕೊಂಡಿದ್ದು.