ಹೃದಯ ಸಿರಿವಂತಿಕೆ

🙏🏼🙏🏼ಹೃದಯ ಸಿರಿವಂತಿಕೆ🙏🏼🙏🏼


ಸುಮಾ ಹಾಗೂ ಪ್ರಿಯಾ ಇಬ್ಬರೂ ಒಂದೇ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಾರೆ. ಇಬ್ಬರೂ ಹೋಟೆಲಿನ ಒಂದೇ ರೂಮಿನಲ್ಲಿ ವಾಸ ಮಾಡುತ್ತಿದ್ದಾರೆ. ಸುಮಾ ಸಿಟಿಯಲ್ಲಿ ಬೆಳೆದವಳು. ಪ್ರಿಯಾ ಹಳ್ಳಿಯ ಹುಡುಗಿ. ಪ್ರಿಯಾಳದು ಎಲ್ಲವದಕ್ಕೂ ಲೆಕ್ಕಾಚಾರ ಮಾಡುವ ಸ್ವಭಾವ! ಬೇಕೆಂತಲೇ ಸುಮ್ಮ ಸುಮ್ಮನೆ ಹಣವನ್ನು ದುಂದುವೆಚ್ಚ ಮಾಡುವ ಸ್ವಭಾವ ಸುಮಾಳದು!

ಪ್ರಿಯಾ ಸಮಯ ಸಿಕ್ಕಾಗಲೆಲ್ಲ ಸುಮಾಳಿಗೆ ಹಾಗೆಲ್ಲಾ ಹಣವನ್ನು ಹಾಳು ಮಾಡಬೇಡ ಎಂದು ಸಲಹೆ ನೀಡುತ್ತಿದ್ದಳು. ಈ ಬಡವರ ಹಣೆ ಬರಹವೇ ಇಷ್ಟು. ತಮ್ಮ ಕೈಯಲ್ಲಿ ಹಣವಿರುವುದಿಲ್ಲ. ಬೇರೆಯವರು ಖರ್ಚು ಮಾಡುವುದನ್ನು ಸಹಿಸುವುದಿಲ್ಲ ಎನ್ನುವ ಭಾವ ಸುಮಾಳದ್ದು!! ಪ್ರಿಯಾ ಏನಾದರೂ ಸಲಹೆ ನೀಡಲು ಬಂದಾಗಲೆಲ್ಲ ಪ್ರಿಯಾ ಬಡವಳು ಎನ್ನುವ ಕಾರಣಕ್ಕೆ ಸುಮಾ ಪ್ರಿಯಾಳನ್ನು ತುಂಬಾ ತುಚ್ಛವಾಗಿ ಕಾಣುತ್ತಿದ್ದಳು.

ಒಮ್ಮೆ ಯಾವುದೋ ವಿಷಯಕ್ಕೆ ಪ್ರಿಯಾ ಸುಮಾಳಿಗೆ ಸಲಹೆ ನೀಡಿದಳು.

“ಪ್ರಿಯಾ, ನೀನು ನನ್ನ ವಿಷಯಕ್ಕೆ ಬರಬೇಡವೆಂದು ನಾನು ನಿನಗೆ ಅದೆಷ್ಟೋ ಸಲ ಹೇಳಿದ್ದೇನೆ. ನನ್ನ ಹತ್ತಿರ ಹಣವಿದೆ.. ನಾನು ಮೋಜು ಮಸ್ತಿ ಮಾಡಿ ಕಾಲ ಕಳೆಯುತ್ತೇನೆ. ನೀರನ್ನು ಪೋಲು ಮಾಡುತ್ತೇನೆ. ಎಲೆಕ್ಟ್ರಿಸಿಟಿ ಬೇಕಾಬಿಟ್ಟಿ ಉಪಯೋಗಿಸುತ್ತೇನೆ. ವಾರ್ಡನ್ ಹತ್ತಿರ ನಾನು ಮಾತನಾಡುತ್ತೇನೆ. ಎಲ್ಲ ಬಿಲ್ಲು ನಾನೇ ತುಂಬುತ್ತೇನೆ . ನಿನಗೆ ಆ ಚಿಂತೆ ಬೇಡ. “ವ್ಯಂಗ್ಯವಾಗಿ ನುಡಿದಳು ಸುಮಾ. 

ಸುಮಾಳ ಮಾತಿಗೆ ನಕ್ಕು ಸುಮ್ಮನಾದಳು ಪ್ರಿಯಾ.

ಆ ದಿನ ಅವರ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ. ಸುಮಾ, ಪ್ರಿಯ ಇಬ್ಬರೂ ಕಾರ್ಯಕ್ರಮಕ್ಕೆ ಹೋಗಲು ತಯಾರಾದರು.

'ಪ್ರಿಯಾ, ಕಾರ್ಯಕ್ರಮದ ಅತಿಥಿಯಾಗಿ ದೂರದ ಹಳ್ಳಿಯಿಂದ ಯಾರೋ ಬರುತ್ತಿದ್ದಾರಂತೆ. ಆತ ಹಳ್ಳಿಯಲ್ಲೇ ದೊಡ್ಡ ಮನುಷ್ಯನಂತೆ. ಈ ಮೆನೆಜ್ ಮೆಂಟ್ ನವರಿಗೆ ಬೇರೆ ಯಾರೂ ಸಿಗಲೇ ಇಲ್ಲವಾ!? ಹಳ್ಳಿಯಲ್ಲಿ ದೊಡ್ಡ ಮನುಷ್ಯ ಆದರೆ ಅದು ಹಳ್ಳಿಗೆ ! ದೊಡ್ಡ ಸಿಟಿಯಲ್ಲಿರುವ ಈ ಕಾಲೇಜಿಗೆ ಅದರಲ್ಲೂ ಮೆಡಿಕಲ್ ಕಾಲೇಜ್ ಕಾರ್ಯಕ್ರಮಕ್ಕೆ ಹಳ್ಳಿ ಗಮಾರ ಆಗಮಿಸುತ್ತಿದ್ದಾನೆ. ಬಾ ಹೋಗೋಣ ಆತ ಯಾರು ಎಂದು ನೋಡಿಕೊಂಡು ಬರೋಣ. “

ಸುಮಾಳ ಮಾತಿಗೆ ಪ್ರಿಯಾ ಮುಗುಳ್ನಕ್ಕಳು.

ಇಬ್ಬರೂ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೋದರು. ಕಾರ್ಯಕ್ರಮದ ಉದ್ಘಾಟನೆಯೂ ಆಯಿತು. ಕಾಲೇಜಿನ ಪ್ರಾಂಶುಪಾಲರು ಮುಖ್ಯ ಅತಿಥಿಯ ಪರಿಚಯ ಆರಂಭಿಸಿದರು.

“ಶ್ರೀಯುತ...ಇವರ ವಾಸ ಹಳ್ಳಿಯಲ್ಲಿ. ಇವರದು ಹಳ್ಳಿಯಲ್ಲಿ ಒಂದು ಫೆಕ್ಟರಿ ಇದೆ. ಆ ಫೆಕ್ಟರಿಯಲ್ಲಿ ಅದೇ ಊರಿನ ಜನರು ಕೆಲಸ ಮಾಡುತ್ತಾರೆ. ಆ ಊರಿನ ಜನರಿಗೆಲ್ಲ ಇವರೇ ಆಧಾರ. ಪ್ರತೀ ವರ್ಷ ತಮ್ಮ ಆದಾಯದ ಒಂದು ಭಾಗವನ್ನು ನಮ್ಮ ಕಾಲೇಜಿನಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ನೀಡಿ ಅವರ ಓದಿಗೆ ಸಹಾಯ ಮಾಡುತ್ತಿದ್ದಾರೆ. ಈ ವರ್ಷ ಕೂಡ ಹತ್ತಾರು ವಿದ್ಯಾರ್ಥಿಗಳು ಇವರ ಸಹಾಯದ ಮೂಲಕ ನಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈಗಾಗಲೇ ನೂರಾರು ವಿದ್ಯಾರ್ಥಿಗಳು ಇವರ ಧನ ಸಹಾಯದಿಂದ ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ವೈದ್ಯರಾಗಿ ಜನರ ಸೇವೆ ಮಾಡುತ್ತಿದ್ದಾರೆ. ಇಲ್ಲಿ ಅವರಿಂದ ಸಹಾಯ ಪಡೆದ ವ್ಯಕ್ತಿಗಳು ಗಳಿಸಲು ಆರಂಭಿಸಿದ ಮೇಲೆ ಹತ್ತಾರು ಬಡ ಮಕ್ಕಳಿಗೆ ಸಹಾಯ ಮಾಡಬೇಕು ಎನ್ನುವುದೇ ಅವರ ಬಯಕೆ. ಹೀಗೆ ಮಾಡಿದರೆ ಹಲವಾರು ಬಡ ವಿದ್ಯಾರ್ಥಿಗಳ ವಿಧ್ಯಾಭ್ಯಾಸಕ್ಕೆ ಸಹಾಯವಾಗುತ್ತದೆ ಎನ್ನುವುದು ಅವರ ದೂರಾಲೋಚನೆ .”

ಅಲ್ಲಿ ನೆರೆದವರು ಚಪ್ಪಾಳೆಯ ಮೂಲಕ ಆ ಅತಿಥಿಗಳಿಗೆ ಗೌರವ ಸಲ್ಲಿಸಿದರು.

ಮತ್ತೆ ಮಾತು ಮುಂದುವರಿಸಿದರು ಪ್ರಾಂಶುಪಾಲರು.

“ಅಷ್ಟೇ ಅಲ್ಲ !!ಅವರ ಮಗಳು ಪ್ರಿಯಾ ಕೂಡ ನಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.”

ಅಲ್ಲಿ ಕುಳಿತಿದ್ದ ಕೆಲವು ವಿದ್ಯಾರ್ಥಿಗಳು ಪ್ರಿಯಾಳ ಕಡೆಗೆ ನೋಡಲು ಆರಂಭಿಸಿದರು. 

ಪಕ್ಕದಲ್ಲೇ ಕುಳಿತ ಸುಮಾ ನಾಚಿಕೆಯ ಮುದ್ದೆಯಾದಳು. ಅವಳ ಮನದಲ್ಲಿ ಸರಿ ತಪ್ಪುಗಳ ಮಂಥನ ಆರಂಭವಾಯಿತು.

ಪ್ರಿಯಾಳ ನಡತೆಯಿಂದ ಅವಳು ಬಡವಳು ಎಂದು ಅಂದುಕೊಂಡು ಆಕೆಗೆ ಎಷ್ಟು ಅವಮಾನ ಮಾಡಿದೆ. ಆದರೂ ಅವಳು ಅದೆಲ್ಲವನ್ನು ಸಹಿಸಿಕೊಂಡಳು. ಹಣವಿದ್ದರೆ ಮಾತ್ರ ಶ್ರೀಮಂತ ಎಂದು ಅಂದುಕೊಂಡುಬಿಟ್ಟಿದ್ದೆ !! ಆದರೆ ಪ್ರಿಯಾ ಹಾಗೂ ಅವಳ ಮನೆಯವರು ತಮ್ಮ ಹಣವನ್ನು ಪರೋಪಕಾರಕ್ಕಾಗಿ ಮೀಸಲಿಟ್ಟು ಗುಣದಲ್ಲಿ ಶ್ರೀಮಂತರು ಎನಿಸಿಕೊಂಡರು. ಹಣವಿದೆ ಎನ್ನುವ ಸೊಕ್ಕಿನಲ್ಲಿ ನಾನು ಆಡಿದ್ದೇ ಆಟ ; ನೋಡಿದ್ದೇ ನೋಟ ಎಂದುಕೊಂಡುಬಿಟ್ಟಿದ್ದೆ.

ಪ್ರಿಯಾ ನನ್ನ ಕಣ್ಣು ತೆರೆಸಿದಳು. ನನ್ನ ಅಪ್ಪ ನನಗೆ ಕೇಳಿದಷ್ಟು ಹಣ ನೀಡುತ್ತಾರೆ. ನಾನು ಅದನ್ನು ಬೇಕಾಬಿಟ್ಟಿ ಖರ್ಚು ಮಾಡಿ ಹಣದ ನಿಜ ಮೌಲ್ಯವನ್ನೇ ಮರೆತುಬಿಟ್ಟಿದ್ದೆ !! ಪ್ರಿಯಾಳ ಸಹವಾಸದಿಂದ ನಾನು ಹೃದಯ ಶ್ರೀಮಂತಳಾಗಬೇಕು. ಅಷ್ಟೇ ಅಲ್ಲ. ಪ್ರಿಯಾಳಂತೆ ನಾನೂ ಸಹ ದುಂದುವೆಚ್ಚ ಬಿಟ್ಟು ಆ ಹಣವನ್ನು ಹಣದ ಅಗತ್ಯವಿರುವವರಿಗೆ ಸಹಾಯ ಹಸ್ತ ಚಾಚಿ ನನ್ನ ಜೀವನವನ್ನು ಶ್ರೀಮಂತಗೊಳಿಸಿಕೊಳ್ಳಬೇಕು.

“ ಪ್ರಿಯಾ, ನನ್ನನ್ನು ಕ್ಷಮಿಸು. ಈ ದಿನ ನನ್ನ ಕಣ್ಣಿನ ಸುತ್ತ ಇದ್ದ ಅಜ್ಞಾನದ ಪೊರೆ ಹರಿದು ಹೋಯಿತು ; ನಿನ್ನ ಸಹವಾಸದಿಂದ ನನಗೊಂದು ದೊಡ್ಡ ಉಡುಗೊರೆ ಸಿಕ್ಕಿತು; ನಿನ್ನಿಂದ ನನಗೆ ಹಣದ ಮೌಲ್ಯದ ಅರಿವಾಯಿತು. “

ಭಾವುಕಳಾದಳು ಸುಮಾ.

ಜ್ಞಾನೋದಯದ ಭಾವದಲ್ಲಿ ತನ್ನ ತೋಳುಗಳಿಂದ ಪ್ರಿಯಾಳನ್ನು ಬಿಗಿದಪ್ಪಿಕೊಂಡಳು ಸುಮಾ.

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...