ಕಂದನ ಬಗೆಗಿನ ಜನಪದ ಗೀತೆಗಳು

ಹಿಂದೆ ಒಬ್ಬ ತಾಯಿ ತನ್ನ ಮಗುವನ್ನು ’ಕಂದ ’ ಎಂದು ಕೂಗಿದ್ದನ್ನು ನಾನು ನನ್ನ ಕಿವಿಯಾರ ಕೇಳಿದಾಗ, ಏನೊ ಒಂದು ಬಗೆಯಾದ ಸಂತೊಷ. ಕಂದ ಎಂಬ ಪದವೇ ಎಷ್ಟು ಚಂದ. ಕಂದ ಎಂದರೆ ಮಗು ಎಂದು ಒಂದರ್ಥವಿದ್ದರೆ, ಕಂದ ನಮ್ಮ ಕನ್ನಡ ಛಂದಸ್ಸಿನ ಒಂದು ಪ್ರಕಾರವಾದ ಪದ್ಯ ಕೂಡ. ಏಲ್ಲೊ ಓದಿದ ನೆನಪು, ಚಂದ ಪದದ ಮೂಲ ಧಾತು ವಾದ ’ಚೆನ್’ ಶುದ್ಧ ದ್ರಾವಿಡ ಪದ ಮತ್ತು ಈ ಪದದ ಅರ್ಥ ಸುಂದರ ಎಂದು. ಸಾಮಾನ್ಯವಾಗಿ ಬೇರೆಯ ಭಾಷೆಗಳಿಂದ ಪದಗಳನ್ನು ಎರವಲು ಪಡೆಯದ ಸಂಸ್ಕೃತ, ದ್ರಾವಿಡದಿಂದ ತನ್ನದಾಗಿಸಿಕೊಂಡ ಕೆಲವು ಧಾತುಗಳಲ್ಲಿ ’ಚೆನ್’ ಕೂಡಾ ಒಂದು. ಕಂದ, ಚಂದ , ಕೂಸು ಮುಂತಾದ ಈ ಚೆಂದವಾದ ಪದಗಳು ಕನ್ನಡಿಗರ ಬಾಯಿಂದ ಕಳೆದು ಹೊಗದಿರಲಿ.
ಮಗು ವಿನ ಬಗ್ಗೆ ಜನಪದದಲ್ಲಿ ಮೂಡಿರುವ ಅತ್ಯಮೂಲ್ಯ ಭಾವನೆಗಳ ಬಗ್ಗೆ ಪುಟಗಟ್ಟಲೆ ಬರೆಯಬಹುದು. ತಾಯಿ ತನ್ನ ಮಗುವನ್ನು ವರ್ಣಿಸುವಾಗ, ಆತನ ಲೀಲೆ ಗಳ ಬಗ್ಗೆ ಹೇಳುವಾಗ ಉಪಯೊಗಿಸಿರುವ ಸುಂದರ ಪ್ರತಿಮೆಗಳು ಸರಳ ಮತ್ತು ಚಂದ. ಒಂದು ಪ್ರತಿಮೆಯನ್ನು ಇಲ್ಲಿ ವಿವರಿಸುತ್ತೇನೆ, ಮಗು ಯಾಕೆ ಅಳ್ತಾಇದ್ದಾನೆ ಎಂದು ಯಾರೊ ಕೇಳಿದಾಗ ತನ್ನ ಮಗು ಚಂಡಿ ಹಿಡಿದಿದ್ದಾನೇ ಎಂಬುದನ್ನು ಹೇಳಲು, ಆಕೆ ಒಂದು ಸುಂದರವಾದ ಪ್ರತಿಮೆ ಯೊಂದಿಗೆ ಹೇಳುತ್ತಾಳೆ, ಕಾಯದೇ ಇರುವ ಹಾಲಿನ ಕೆನೆ ಬೇಡಿ ನನ್ನ ಕಂದ ಅಳುತಿದ್ದಾನೆ. ಹಾಲಿನಲ್ಲಿ ಕೆನೆ ಮೂಡಲು, ಹಾಲನ್ನು ಕಾಯಿಸಬೇಕು, ಮಗು ಚಂಡಿ ಹಿಡಿದಾಗ ಮಗು ವನ್ನು ಸಮಾಧಾನ ಮಾಡಾಲು ಎಷ್ಟು ಕಷ್ಟ ಎಂದರೆ ಕಾಯದೇ ಇರೊ ಹಾಲಿನಲ್ಲಿ ಕೆನೆ ಹುಡುಕಿದಷ್ಟೇ ಕಷ್ಟ.. ಮಗುವಿನ ಬಗ್ಗೆ ಇರುವ ಕೆಲವು ಸುಂದರವಾದ ಜನಪದ ಗೀತೆಗಳನ್ನು ಇಲ್ಲಿ ನಿಮ್ಮ ಮುಂದೆ ಇರಿಸಲಾಗಿದೆ.
ಯಾಕಳುವೆ ಎಲೆರಂಗ ಬೇಕಾದ್ದು ನಿನಗೀವೆ
ನಾಕೆಮ್ಮೆ ಕರೆದ ನೊರೆ ಹಾಲು| ಸಕ್ಕರೆ
ನೀ ಕೇಳಿದಾಗ ಕೊಡುವೇನು||
ಯಾತಕಳುತಾನೆಂದು ಎಲ್ಲಾರು ಕೇಳ್ಯಾರು
ಕಾಯದ ಹಾಲ ಕೆನೆ ಬೇಡಿ| ಕಂದಯ್ಯ
ಕಾಡಿ ಕೈಬಿಟ್ಟು ಇಳಿದಾನ||
ಅಳುವ ಕಂದನ ತುಟಿಯು ಹವಳದ ಕುಡಿಹಂಗೆ
ಕುಡಿಹುಬ್ಬು ಬೇವಿನೆಸಳಂಗೆ| ಕಣ್ಣೋಟ
ಶಿವನ ಕೈಯಲಗು ಹೊಳೆದಂತೆ||
ಅತ್ತರೆ ಅಳಲವ್ವ ಈ ಕೂಸು ನನಗಿರಲಿ
ಕೆಟ್ಟರೆ ಕೆಡಲಿ ಮನೆಗೆಲಸ| ಕಂದನಂತ
ಮಕ್ಕಳಿರಲವ್ವ ಮನೆತುಂಬ||
ಜೋಗೂಳ ಹಾಡಿದರೆ ಆಗಲೇ ಕೇಳ್ಯಾನು
ಹಾಲ ಹಂಬಲವ ಮರೆತಾನು| ಕಂದಂಗೆ
ಜೋಗೂಳದಾಗೆ ಅತಿಮುದ್ದು||
ಅತ್ತು ಕಾಡುವನಲ್ಲ ಮತ್ತೆ ಬೇಡುವನಲ್ಲ
ಎತ್ತಿಕೊಳ್ಳೆಂಬ ಹಟವಿಲ್ಲ| ನಿನ್ನಂತ
ಹತ್ತು ಮಕ್ಕಳೂ ಇರಬಹುದು||
ಆಡಿ ಬಾ ಎನ್ನ ಕಂದ ಅಂಗಳ ತೊಳೆದೇನ
ತೆಂಗಿನ ಕಾಯಿ ತಿಳಿನೀರ| ತಕ್ಕೊಂಡು
ಬಂಗಾರದ ಮೊರೆ ತೊಳೆದೇನ||
ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕೆ
ಕೂಸು ಕಂದಯ್ಯ ಒಳ ಹೊರಗ| ಆಡಿದರೆ
ಬೀಸಣಿಗೆ ಗಾಳಿ ಸುಳಿದಾವ||

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...