ಲೇಖನ ಚಿಹ್ನೆಗಳು

ಲೇಖನ ಚಿಹ್ನೆಗಳು                         ಕೃಪೆ-ಬರಹ ಅಂತರ್ಜಾಲ
ಕನ್ನಡದಲ್ಲಿ ಗದ್ಯವನ್ನಾಗಲಿ, ಪದ್ಯವನ್ನಾಗಲಿ ಬರೆಯುವಾಗ ಹಿಂದಿನ ಕಾಲದಲ್ಲಿ ವಿರಾಮ ಚಿಹ್ನೆಗಳನ್ನು ಉಪಯೋಗಿಸುತ್ತ ಇರಲಿಲ್ಲ. ತಾಳೆಗರಿಗಳಲ್ಲಿ ಒಂದು ಪದ್ಯವನ್ನು ಪೂರ್ತಿ ಸಾಲಾಗಿ ಬರೆದ ಮೇಲೆ ಕೊನೆಯಲ್ಲಿ ಒಂದು (|) ಗೂಟವನ್ನು ಹಾಕಿ ಗುರುತಿಸಿದರೆ ಆಗಿಹೋಯಿತು. ಕೆಲವರು ಅದನ್ನೂ ಹಾಕುತ್ತಿರಲಿಲ್ಲ. ಇಂಗ್ಲಿಷ್ ಭಾಷೆಯ ಅಭ್ಯಾಸವು ಹೆಚ್ಚಾದ ಹಾಗೆಲ್ಲ, ಆ ಭಾಷೆಯಲ್ಲಿ ಉಪಯೋಗಿಸುತ್ತಿದ್ದ ವಿರಾಮ ಚಿಹ್ನೆಗಳ ಪ್ರಯೋಜನದ ಪರಿಚಯವಾಯಿತು, ನಮ್ಮವರಿಗೂ. ಹೀಗಾಗಿ ಈಗ ಕನ್ನಡದಲ್ಲಿ ಬರಹ ಮಾಡುವರು ಕೆಲವು ವಿರಾಮ ಚಿಹ್ನೆಗಳನ್ನು ಉಪಯೋಗಿಸುತ್ತಿದ್ದಾರೆ. ಆದರೂ ಈ ಚಿಹ್ನೆಗಳ ಉಪಯೋಗವು ಒಂದೇ ಬಗೆಯಾಗಿ ಆಗುತ್ತಿಲ್ಲ. ಆದುದರಿಂದ, ಈ ಚಿಹ್ನೆಗಳ ಬಗ್ಗೆ ಸ್ಪಷ್ಟವಾದ ತಿಳಿವಳಿಕೆಯನ್ನು ಪಡೆದಿರುವುದು ಒಳ್ಳೆಯದು. 
ವಿರಾಮ ಚಿಹ್ನೆಗಳು ಓದುಗನಿಗೆಂದು ಲೇಖಕನು ನೀಡುವ ಮಾರ್ಗದರ್ಶನ ಎಂದು ತಿಳಿಯಬೇಕು. ಓದುಗನು ಒಂದು ಲೇಖನವನ್ನು ಓದುವಾಗ ಕೆಲವು ಕಡೆ ಸ್ವಲ್ಪ ತಡೆದು ಓದುತ್ತಾನೆ. ಆಗ ಓದಿದ ವಾಕ್ಯದ ಅರ್ಥ ಹೆಚ್ಚು ಸ್ಪಷ್ಟವಾಗುತ್ತದೆ. ಒಂದೊಂದು ವಿರಾಮ ಚಿಹ್ನೆಗೂ ಒಂದು ಅರ್ಥವಿದೆ. ಅದನ್ನು ಉಪಯೋಗಿಸುವಾಗ ಲೇಖಕನು ಒಂದು ಉದ್ದೇಶವನ್ನು ಇಟ್ಟುಕೊಂಡಿರುತ್ತಾನೆ. ಆದುದರಿಂದ ಈ ಚಿಹ್ನೆಗಳ ಬಗ್ಗೆ ವಿವರವಾಗಿ ತಿಳಿವಳಿಕೆ ಹೊಂದಿರುವುದು, ಲೇಖಕನ ಅಭಿಪ್ರಾಯವನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತದೆ. ಈ ದೃಷ್ಟಿಯಿಂದ ವಿರಾಮ ಚಿಹ್ನೆಗಳನ್ನೂ ಅವುಗಳನ್ನೂ ಉಪಯೋಗಿಸುವ ಬಗೆಯನ್ನೂ ಕುರಿತು ವಿವರಣೆಯನ್ನು ನೀಡಲಾಗಿದೆ. 
ಲೇಖನ ಚಿಹ್ನೆಗಳು ಹೀಗಿವೆ:

ಚಿಹ್ನೆಯ ಹೆಸರುಚಿಹ್ನೆ
೧.ಪೂರ್ಣವಿರಾಮ.
೨.ಅರ್ಧವಿರಾಮ;
೩.ಅಲ್ಪ ವಿರಾಮ,
೪.ವಿವರಣಸೂಚಿ:
೫.ಕಂಸ ಅಥವಾ ಆವರಣ( ) ಅಥವಾ - --
೬.ಪ್ರಶ್ನಾರ್ಥಕ ಚಿಹ್ನೆ?
೭.ಆಶ್ಚರ್ಯ ಸೂಚಕ ಚಿಹ್ನೆ!
೮.ಉದ್ಧಾರ ಸೂಚಕ ಚಿಹ್ನೆ“ ” ಅಥವಾ ‘ ’
ಇವುಗಳ ಬಗ್ಗೆ, ಇವುಗಳನ್ನು ಏಕೆ ಉಪಯೋಗಿಸುತ್ತಾರೆ ಎಂಬ ಬಗ್ಗೆ ವಿವರಗಳನ್ನು ತಿಳಿದುಕೊಳ್ಳೋಣ. 
ಪೂರ್ಣವಿರಾಮ ಇದು- .
ಒಂದು ವಾಕ್ಯವು ಪೂರೈಸಿದಾಗ ಆ ವಾಕ್ಯದ ಕೊನೆಯಲ್ಲಿ ಈ ಚಿಹ್ನೆಯನ್ನು ಉಪಯೋಗಿಸುತ್ತಾರೆ. ಪ್ರತಿಯೊಂದು ವಾಕ್ಯವಾದ ಮೇಲೆಯೂ ಇದನ್ನು ಉಪಯೋಗಿಸುತ್ತಾರೆ. ಅಂದರೆ ಒಂದು ಅಭಿಪ್ರಾಯ ಆ ವಾಕ್ಯದಲ್ಲಿ ಪೂರ್ತಿಯಾಗಿ ಹೇಳಲಾಗಿದೆ ಎಂದು ಅರ್ಥ. ಆ ವಾಕ್ಯಗಳು ಹೇಳಿಕೆ ಆಗಿರಬಹುದು; ವಿನಂತಿ, ಪ್ರಾರ್ಥನೆ ಆಗಿರಬಹುದು.

ಉದಾ:
೧. ಕನ್ನಡಭಾಷೆಯು ತುಂಬ ಪ್ರಾಚೀನವಾದ ಭಾಷೆ.
೨. ನಾನು ನಿಮಗೆ ಒಂದು ಪತ್ರವನ್ನು ಬರೆಯಬಹುದೆ.
೩. ನನ್ನಿಂದ ನಿಮಗೆ ತೊಂದರೆಯಾಗಿಲ್ಲ, ತಾನೆ.
ಈ ವಾಕ್ಯಗಳಲ್ಲಿ ಮೊದಲನೆಯದು ಒಂದು ಹೇಳಿಕೆ. ಎರಡನೆಯ ಮತ್ತು ಮೂರನೆಯ ವಾಕ್ಯಗಳು ಪ್ರಶ್ನೆಯಂತೆ ಇವೆ. ಆದರೂ, ಆ ವಾಕ್ಯಗಳು ಒಂದು ರೀತಿಯಾಗಿ ವಿನಂತಿ ಮಾಡುತ್ತಿರುವುದು ಕಂಡುಬರುತ್ತದೆ. ಅಂಥ ವಾಕ್ಯಗಳೂ ಹೇಳಿಕೆಗೆ ಸಮಾನವೆಂದು ಗಣಿಸಬಹುದು.
ಎಲ್ಲ ಸಂಕ್ಷಿಪ್ತಗಳ (abbreviations) ಮುಂದೆ ಪೂರ್ಣ ವಿರಾಮವನ್ನು ಹಾಕಬೇಕು.

ಉದಾ: ಡಾ. ಯು.ಎಸ್.ಎ., ಕ.ಸಾ.ಪ.
ಕುವೆಂಪು, ಪು.ತಿ.ನ. ವ್ಯಕ್ತಿಗಳ ಸಂಕ್ಷಿಪ್ತ ನಾಮವನ್ನು ಉಪಯೋಗಿಸುವಾಗ ಅವರು ಹೇಗೆ ಬರೆಯುತ್ತಿದ್ದರೋ ಹಾಗೆಯೇ ಬರೆಯಬೇಕು.
ಬರಹದಲ್ಲಿ ಯಾವುದಾದರೂ ಭಾಗವನ್ನು ಬಿಟ್ಟಿದ್ದರೆ ಅದನ್ನು ಮೂರು ಪೂರ್ಣವಿರಾಮಗಳನ್ನು ಹಾಕಿ ತೋರಿಸಬೇಕು (...)
ಬೇರೊಬ್ಬರ ವಾಕ್ಯಗಳನ್ನು ಉದ್ಧಾರ ಮಾಡಿ ಕೊನೆಯಲ್ಲಿ ಸ್ವಲ್ಪ ಭಾಗವನ್ನು ಬಿಟ್ಟಿದ್ದರೆ ಅದನ್ನು ನಾಲ್ಕು ಪೂರ್ಣವಿರಾಮಗಳನ್ನು ಹಾಕಿ ತೋರಿಸಬೇಕು (....)
* * * * *
ಅರ್ಧ ವಿರಾಮ ಇದು- ;
ಎರಡು ಸಂಪೂರ್ಣ ವಾಕ್ಯಗಳು ಬೇರೆಬೇರೆಯವೇ ಆಗಿದ್ದರೂ ಅವುಗಳಿಗೆ ಸಂಬಂಧ ಇದ್ದರೆ ಅವುಗಳ ನಡುವೆ ಅರ್ಧವಿರಾಮವನ್ನು ಉಪಯೋಗಿಸಬೇಕು.

ಉದಾ: 
೧) ಧರ್ಮದ ಸ್ವರೂಪ ಬಹು ಸೂಕ್ಷ ವಾದದ್ದು; ಅದನ್ನು ಮಹಾತ್ಮರೂ ತಿಳಿಯುವುದು ಕಷ್ಟ.
೨) ಒಂದು ಸಂಗತಿಯೇನೋ ನಿಶ್ಚಯ; ಈ ಕಾಲಕ್ಕೆ ಕೊನೆಗಾಲ ಒದಗಿದೆ; ಅದಕ್ಕೇ ಈ ಕೌರವರು ಲೋಭ ಮೋಹಗಳಿಗೆ ವಶರಾಗಿದ್ದಾರೆ.
ಎರಡನೆಯ ವಾಕ್ಯದಲ್ಲಿ ಮೂರು ಉಪವಾಕ್ಯಗಳಿದ್ದರೂ ಎಲ್ಲಕ್ಕೂ ಸಂಬಂಧವಿರುವುದು ಸ್ಪಷ್ಟ.
ಎರಡು ವಾಕ್ಯಗಳಿಗೆ ಸಂಬಂಧವಿದ್ದು ಎರಡನೆಯ ವಾಕ್ಯವು ಹೀಗೆ, ಆಮೇಲೆ, ಅಲ್ಲದೆ, ಪರಿಣಾಮವಾಗಿ, ಕೊನೆಗೆ, ಇನ್ನು ಮುಂದೆ, ಬಳಿಕ, ಆದರೆ, ಈ ರೀತಿಯಲ್ಲಿ ಎಂಬಂಥ ಶಬ್ದಗಳಿಂದ ಮೊದಲಾದರೆ ಅಂಥ ಕಡೆಗಳಲ್ಲಿ ಮೊದಲ ವಾಕ್ಯದ ಕೊನೆಯಲ್ಲಿ ಅರ್ಧವಿರಾಮ ಚಿಹ್ನೆಯನ್ನು ಹಾಕಬೇಕು.
ಉದಾ: ನನ್ನ ರಕ್ಷಣೆಯಲ್ಲಿ ದನದ ಮಂದೆ ಬೆಳೆಯುತ್ತಿದೆ; ರೋಗರಹಿತವಾಗಿರುತ್ತದೆ; ಅಲ್ಲದೆ ನಾನು ಒಳ್ಳೆಯ ಜಾತಿಯ ಹೋರಿಗಳ ಲಕ್ಷಣವನ್ನು ಬಲ್ಲೆ.
ಈ ಉದಾಹರಣೆಯಲ್ಲಿ ಎರಡೂ ಬಗೆಯ ವಾಕ್ಯಗಳಿರುವುದನ್ನು ಕಾಣಬಹುದು.
ಈ ವಿರಾಮ ಚಿಹ್ನೆಯ ಬಗ್ಗೆ ಒಂದು ಎಚ್ಚರಿಕೆಯನ್ನು ನೀಡಬೇಕು. ಇದನ್ನು ಅತಿಯಾಗಿ ಉಪಯೋಗಿಸುವದರಿಂದ ಶೈಲಿಯಲ್ಲಿ ಕೊಂಚ ಬೇಸರ ತರುವ ಗುಣ ಕೂಡಿಬಿಡುತ್ತವೆ.
* * * * *
ಅಲ್ಪ ವಿರಾಮ ಇದು- ,
ವಿರಾಮ ಚಿಹ್ನೆಗಳಲ್ಲೆಲ್ಲ ಅತ್ಯಂತವಾಗಿ ಉಪಯೋಗವಾಗುವ ಚಿಹ್ನೆ ಇದು --, . ಇದನ್ನು ಎಲ್ಲೆಲ್ಲಿ ಉಪಯೋಗಿಸಬೇಕು ಎಂಬುದನ್ನು ವಿವರವಾಗಿ ತಿಳಿದಿದ್ದರೆ ಒಳ್ಳೆಯದು.
ಒಂದು ವಾಕ್ಯವು ದೀರ್ಘವಾಗಿದ್ದು ಅಧೀನವಾಕ್ಯವು ಪ್ರಾರಂಭದಲ್ಲಿ ಬಂದರೆ ಆ ಅಧೀನವಾಕ್ಯವಾದ ಕೂಡಲೆ ಒಂದು ಅಲ್ಪ ವಿರಾಮವನ್ನು ಉಪಯೋಗಿಸಬೇಕು.

ಉದಾ: ಶಂಕರನು ಕ್ಷಮಿಸಿ, ಅರ್ಜುನನಿಂದ ಕಿತ್ತುಕೊಂಡಿದ್ದ ಅಕ್ಷಯ ಬಾಣಗಳನ್ನೂ ಗಾಂಡೀವವನ್ನೂ ಹಿಂತಿರುಗಿಕೊಟ್ಟು, ಅವನ ಅಪೇಕ್ಷೆಯಂತೆ ತನ್ನಲ್ಲಿದ್ದ ಪಾಶು ಪತಾಸ್ತ್ರವನ್ನು ಕೊಟ್ಟನು. (ವಚನ ಭಾರತ - ೧೨೭).
ಅಧೀನವಾಕ್ಯವು ಹೃದಯದಿಂದ ಕೊನೆಯಾಗಿ ವಾಕ್ಯವು ಮುಂದುವರಿದರೆ, ಹೃದಯದ ಬಳಿಕ ಅಲ್ಪ ವಿರಾಮವನ್ನು ಉಪಯೋಗಿಸಬೇಕು.

ಉದಾ: ಆ ಬೀದಿಯಲ್ಲಿ ಮನೆಯ ಸಂಖ್ಯೆಯನ್ನು ಗುರುತಿಸಿ, ಆ ಮನೆಯ ಬಳಿಗೆ ಬಂದನು.
ವಾಕ್ಯವು ಆದರೆ, ಮತ್ತೆ, ಆದ್ದರಿಂದ, ಹೀಗೆ, ಮುಂತಾದ ಶಬ್ದಗಳಿಂದ ಮೊದಲಾದರೆ ಆ ಶಬ್ದಗಳಿಂದ ಬಳಿಕ ಅಲ್ಪವಿರಾಮವನ್ನು ಉಪಯೋಗಿಸಬೇಕು.

ಉದಾ: ಅವನೇನೋ ಬುದ್ಧಿವಂತನೆ; ಆದರೆ, ಸೋಮಾರಿ.
ವಾಕ್ಯವು ವಿವರಣಾತ್ಮಕ ನುಡಿಗಟ್ಟುಗಳಿಂದ ಪ್ರಾರಂಭವಾದರೆ, ಆಗ ಅಲ್ಪವಿರಾಮವಿರಬೇಕು, ಆ ನುಡಿಗಟ್ಟುಗಳು ಮುಂದೆ. (ನ್ಯಾಯಾಲಯವು ಹೇಳಿರುವಂತೆ, ಮನುಸೂಚಿಸುವರಂತೆ ರಾಮಾಯಣದಲ್ಲಿರುವಂತೆ, ಪುರಾಣಗಳು ತಿಳಿಸುವಂತೆ - ಇತ್ಯಾದಿ ನುಡಿಗಟ್ಟುಗಳನ್ನು ನೆನೆಯಬಹುದು)

ಉದಾ: ವಕೀಲರು ವಿವರಿಸಿರುವಂತೆ, ಆತನು ಕಣ್ಣಾರೆ ನೋಡಿರಲಾರ; ಏಕೆಂದರೆ, ಅವನು ಕುರುಡ.
ವಾಕ್ಯದ ಯಾವುದಾದರೂ ಮುಖ್ಯವಾಕ್ಯಕ್ಕೆ ಸಂಬಂಧ ಹೊಂದಿರದಿದ್ದರೆ ಆಗ ಆ ಸಂಬಂಧ ಹೊಂದಿರದ ನುಡಿಗಟ್ಟಿನ ಹಿಂದೆ ಮುಂದೆ ಅಲ್ಪ ವಿರಾಮವಿರಬೇಕು.

ಉದಾ: ಶ್ರೀರಾಮರಾಯರು, ನನ್ನ ಸೋದರಮಾವ ಮಹಾ ಶ್ರೀಮಂತರು; ಊರಿನ ದೇವಸ್ಥಾನಕ್ಕೆ ಅವರೇ ಧರ್ಮದರ್ಶಿ.
ಅನೇಕ ಶಬ್ದಗಳು, ನುಡಿಗಟ್ಟುಗಳು ಒಂದೇ ವಾಕ್ಯದಲ್ಲಿ ಬಂದರೆ ಅವುಗಳಲ್ಲಿ ಕೊನೆಯದನ್ನು ಬಿಟ್ಟು ಮಿಕ್ಕವುಗಳಾದ ಮೇಲೆ ಅಲ್ಪ ವಿರಾಮವಿರಬೇಕು.

ಉದಾ: ದಯಾನಂದರು ಉದಾರಿ, ಧರ್ಮಿಷ್ಠ, ವಿದ್ಯಾವಂತ, ಅಭಿಮಾನಿ, ಸಮರ್ಥ ಮತ್ತು ವಿವೇಕಿ.
ಈ ದಿನ ಸ್ನೇಹಿತರು ಬರುತ್ತಾರೆ; ಊಟಕ್ಕೆ ಅನ್ನ, ಸಾರು, ಹಪ್ಪಳ, ಸಂಡಿಗೆ, ಒಬ್ಬಟ್ಟು ಮತ್ತು ಕಾಯ್ಗಡುಬು-- ಇಷ್ಟನ್ನೂ ತಯಾರಿಸಿರಬೇಕು. ಹೀಗೆಯೇ ದ್ವಂದ್ವ ಶಬ್ದಗಳು ಜೊತೆಯಾಗಿ ಬಂದರೂ ವಾಕ್ಯದಲ್ಲಿ ಅಲ್ಪವಿರಾಮವನ್ನು ಉಪಯೋಗಿಸಬೇಕು.

ಉದಾ: ವಿದ್ಯಾಭ್ಯಾಸದಲ್ಲಿ ಅಕ್ಷರ ಮತ್ತೆ ಕಾಗುಣಿತ, ವ್ಯಾಕರಣ ಮತ್ತು ಛಂದಸ್ಸು, ಪದ್ಯ ಮತ್ತು ಗದ್ಯ ಇವುಗಳನ್ನು ಯಾವಾಗಲೂ ಜೊತೆಯಾಗಿಯೇ ಕಲಿಯಬೇಕು.
ತಾರೀಕು, ತಿಂಗಳು, ವರ್ಷ ಇವುಗಳನ್ನು ಬರೆಯುವಾಗ ಪ್ರತಿಯೊಂದರ ಮುಂದೆ ಅಲ್ಪ ವಿರಾಮವಿರಬೇಕು.

ಉದಾ: ೧೫, ಏಪ್ರಿಲ್, ೨೦೦೫, ಶುಕ್ರವಾರ, ಈ ನನ್ನ ಮನೆಯ ಗೃಹಪ್ರವೇಶವಾಯಿತು.
ಉದ್ಧಾರಮಾಡಿದ ವಾಕ್ಯಗಳ ಹೀಗೆ ಅಲ್ಪವಿರಾಮವಿರಬೇಕು.

ಉದಾ: ವಿದ್ಯಾರ್ಥಿಗೆ ಉಪಾಧ್ಯಾಯರು ಹೇಳಿದರು, “ನೀನು ಮೂರ್ಖ; ಆದರೆ, ಸಿರಿವಂತ; ಆದ್ದರಿಂದ, ನಿನ್ನನ್ನು ಕ್ಷಮಿಸಿದ್ದೇನೆ.”
ಆಶ್ಚರ್ಯಸೂಚಕ ಉದ್ಗಾರಗಳ ಮುಂದೆ ಅಲ್ಪವಿರಾಮವಿರಬೇಕು.

ಉದಾ: ಆಹಾ, ಏನು ನೋಟ! ಏನು ಊಟ! ಅಬ್ಬಾ, ಎಂಥ ದೊಡ್ಡ ಸಭೆ!
ವ್ಯಕ್ತಿಯ ಸದರಿಗಳನ್ನು ತಿಳಿಸುವಾಗ ಅಲ್ಪವಿರಾಮವನ್ನು ಉಪಯೋಗಿಸಬೇಕು.

ಉದಾ: ಶ್ರೀ ಗೋಪಾಲರಾಯರು ಎಂ.ಎ., ಬಿ.ಎಲ್.
ಅಂಕಿಗಳನ್ನು ಬರೆಯುವಾಗ ಸಾವಿರವನ್ನು ಸೂಚಿಸುವ ಅಂಕಿಯ ಮುಂದೆ
1,117 20,636 1,81,000
ವಿಳಾಸಗಳನ್ನು ಬರೆಯುವಾಗ ಯಾವ ವಿರಾಮ ಚಿಹ್ನೆಗಳನ್ನೂ ಉಪಯೋಗಿಸಬೇಕಾಗಿಲ್ಲ.
ಶ್ರೀ ಸಂತಾನ ಗೋಪಾಲಕೃಷ್ಣರಾಯರು
೩೭, ಪಾತಾಳಮ್ಮ ಬೀದಿ
ಜಯನಗರ ೫೬೦ ೦೭೦
ಭಾಷೆಯಲ್ಲಿ ಎಲ್ಲ ಬಗೆಯ ವಾಕ್ಯಗಳನ್ನೂ ಉದಾಹರಣೆಗಳ ಮೂಲಕ ತೋರಿಸಲಾಗುವುದಿಲ್ಲ. ಈ ಮಾದರಿಗಳಿಂದ ವಾಕ್ಯಗಳಲ್ಲಿ ಓದುಗರು ಎಲ್ಲಿ ಸ್ವಲ್ಪ ನಿಲ್ಲಿಸಿ ಓದಬೇಕು ಎನ್ನಿಸುತ್ತದೆಯೋ ಅದನ್ನು ಗಮನಿಸಿ ಅಲ್ಪ ವಿರಾಮವನ್ನು ಉಪಯೋಗಿಸಬೇಕು.
* * * * *
ವಿವರಣ ಸೂಚಿ ಇದು- : (ಕೆಲವು ವೇಳೆ ಇದನ್ನು :- ಎಂದೂ ಬರೆಯುವುದುಂಟು) ಒಂದು ವಾಕ್ಯದಲ್ಲಿ : ಈ ಚಿಹ್ನೆಯು ಬರಬೇಕಾದರೆ ವಾಕ್ಯದ ವಾಚನಕ್ಕೆ ಹೆಚ್ಚಾದ ತಡೆ ಬಂದಿದೆ ಎಂದು ಅರ್ಥ. ಈ ಕಡೆಗೆ ಕಾರಣಗಳನ್ನು ವಿವರವಾಗಿ ತಿಳಿಯೋಣ.
ಒಂದು ವಾಕ್ಯದಲ್ಲಿ ವಸ್ತುಗಳ ಪಟ್ಟಿ ಅರ್ಥ ವಿವರಗಳ ಪಟ್ಟಿ ಬಂದರೆ ಆಗ : ಈ ಚಿಹ್ನೆಯನ್ನು ಉಪಯೋಗಿಸಬೇಕು.

ಉದಾ: ನನಗೆ ಈ ಮುಂದೆ ತಿಳಿಸಿರುವವುಗಳನ್ನು ಕಳುಹಿಸಿ: ನಾಲ್ಕು ಗಡಿಯಾರಗಳು, ಹದಿನೈದು ಕತ್ತರಿಗಳು, ಮೂವತ್ತು, ಚಾಕುಗಳು ಮತ್ತು ಒಂದು ಡಜನ್ ಉಳಿಗಳು.
ಇನ್ನೊಂದು ವಾಕ್ಯ.
ನೀನು ಈ ದಿನ ಮಾಡಬೇಕಾದ ಕೆಲಸಗಳು: ಬ್ಯಾಂಕಿಗೆ ಹೋಗಿ ಹಣ ತರುವುದು, ಅಂಗಡಿಯಿಂದ ಸಾಮಾನು ತರುವುದು, ಔಷಧಗಳನ್ನು ಕೊಳ್ಳುವುದು ಮತ್ತು ಅಂಚೆಯ ಪತ್ರಗಳನ್ನು ಅಂಚೆಯ ಪೆಟ್ಟಿಗೆಗೆ ಹಾಕುವುದು.
ವ್ಯವಹಾರದ ಪತ್ರಗಳಲ್ಲಿ ವ್ಯಕ್ತಿಯ, ಸಂಸ್ಥೆಯ ಹೆಸರನ್ನೂ ಬರೆದ ಬಳಿಕ 
ಮಾನ್ಯ ಪ್ರಿನ್ಸಿಪಾಲರೇ:
ಸ್ನೇಹದ, ಸಾಂಸಾರಿಕವಾದ ಪತ್ರಗಳಲ್ಲಿ ಅಲ್ಪವಿರಾಮವನ್ನು ಉಪಯೋಗಿಸಬೇಕು.
ಪ್ರಿಯ ಗೆಳೆಯ,
ಪ್ರಿಯ ಗೆಳತಿ,
ಕಾಲ, ಅಂಕೆ, ಸಂದರ್ಭಗಳನ್ನು ತಿಳಿಸುವಾಗ ಭಾಗಗಳನ್ನು ಬೇರ್ಪಡಿಸಬೇಕಾದರೆ

ಉದಾ: ಗಂಟೆ ೧೦:೩೦, ಅಧ್ಯಾಯ X : ಭಾಗ ೬, ಅಲಂಕಾರ ೧೫ : ಉದಾ ೬
* * * * *
ಕಂಸ ಅಥವಾ ಆವರಣ ಚಿಹ್ನೆ ಇದು- ( )
ಕೆಲವು ವೇಳೆ ( ) ಕಂಸಗಳ ಬದಲು ಹೀಗೆ ಕಿರು ಅಡ್ಡ ಗೀಟುಗಳನ್ನು ಉಪಯೋಗಿಸುತ್ತಾರೆ. ಇಂಗ್ಲಿಷಿನಲ್ಲೂ parentheses ಎಂದು ಕರೆಯುವ ಇದನ್ನು ವಾಕ್ಯಗಳಲ್ಲಿ ವ್ಯಾಕರಣದ ಬಾಂಧವ್ಯವಿಲ್ಲದ ಭಾಗಗಳನ್ನು ಗುರುತಿಸಲು ಉಪಯೋಗಿಸುತ್ತಾರೆ.

ಉದಾ: ಶಾಂತಿ (ನನ್ನ ತಂಗಿಯ ಮಗಳು) ಈಗ ಅಮೇರಿಕದಲ್ಲಿ ನೆಲೆಸಿದ್ದಾಳೆ.
ಮನೆಯ ಮುಂದೆ ಹೀಗೆ ಬರೆದಿದೆ: ಸರ್ವೇಜನಾಃ ಸುಖಿನೋಭವಂತು (ಎಲ್ಲರೂ ಸುಖಿಗಳಾಗಿರಲಿ).
ಮಾನವರು ಗರ್ವಿಷ್ಠರಾದರೆ - ನಾವೆಲ್ಲರೂ ಗರ್ವಿಷ್ಠರೆ - ಸ್ನೇಹವು ವರ್ಧಿಸಲಾರದು.
ಇಂಥ ಸಂದರ್ಭಗಳಲ್ಲಿ ಬೇರೆಯ ವಾಕ್ಯಗಳನ್ನು ಬರೆಯುವುದೇ ಲೇಸು. ಅರ್ಥ ಸರಳವಾಗಿ ತಿಳಿಯಬರುತ್ತದೆ.
* * * * *
ಪ್ರಶ್ನಾರ್ಥಕ ಚಿಹ್ನೆ ಇದು- ?
ಎಲ್ಲ ಪ್ರಶ್ನೆಗಳ ಕೊನೆಯಲ್ಲಿ ಈ ಚಿಹ್ನೆಯನ್ನು ಉಪಯೋಗಿಸಬೇಕು.

ಉದಾ: ನಿನ್ನ ಹೆಸರೇನು?
ಆ ಪೆಟ್ಟಿಗೆಯಲ್ಲಿ ಏನಿದೆ?
ನಿಮ್ಮ ತಂದೆ ಊರಿನಲ್ಲಿದ್ದಾರೆಯೆ?
ಇಂದು ಶಾಲೆಯನ್ನು ಏಕೆ ಮುಚ್ಚಿದ್ದಾರೆ?
ವಾಕ್ಯದಲ್ಲಿ ಅನೇಕ ಪ್ರಶ್ನೆಗಳಿದ್ದರೆ ಎಲ್ಲ ಪ್ರಶ್ನೆಗಳಿಗೂ ಈ ಚಿಹ್ನೆಯನ್ನು ಉಪಯೋಗಿಸಬೇಕು.

ಉದಾ: ನಿನ್ನ ಗೆಳೆಯ ಆರೋಗ್ಯವೆ? ಊರಿನಲ್ಲಿ ಹಾಗೆಯೇ ಶಾಲೆಗೆ ಹೋಗುತ್ತಿದ್ದಾನೆಯೇ?
* * * * *
ಆಶ್ಚರ್ಯಸೂಚಕ ಚಿಹ್ನೆ ಇದು- !
ಇದನ್ನು ಆಶ್ಚರ್ಯ, ಭಾವುಕತೆ, ಅನುಕಂಪ, ಆಜ್ಞೆ, ಉದ್ವೇಗ ಮುಂತಾದ ಭಾವನೆಗಳನ್ನು ತಿಳಿಸುವ ಉದ್ಗಾರಗಳ ಮುಂದೆ ಉಪಯೋಗಿಸಬೇಕು.

ಉದಾ:
ಆ ಹಳದಿ ಹೂಗಳ ಮರವನ್ನು ನೋಡು!
ನಿನ್ನ ವೇಷವನ್ನು ನೋಡುವುದು ಕಷ್ಟ!
ಓ! ಮರ ಉರುಳಿಹೋಯಿತು.
ರಸೀತಿಯನ್ನು ಇಂದೇ ಹಿಂದಿರುಗಿಸು!
ಅವನ ಮಾತನ್ನು ನಂಬಬಹುದೇ!
ಆ ಮಾತಿನ ಅರ್ಥ ತಿಳಿಯಿತೆ!
* * * * *
ಉದ್ಧಾರ ಸೂಚಕ ಚಿಹ್ನೆ ಇದು- “ ” ಅಥವಾ ‘ ’.
ಮತ್ತೊಬ್ಬರು ಆಡಿದ ಮಾತುಗಳೆಂದು ತಿಳಿಸಬೇಕಾದಾಗ ಆ ಮಾತುಗಳನ್ನು ಉದ್ಧಾರ ಚಿಹ್ನೆಗಳ ಒಳಗೆ ಬರೆಯಬೇಕು. (ಈ ಚಿಹ್ನೆಯನ್ನು 'ಬಕಗ್ರೀವ' ಎಂದು ಕೆಲವರು ಕರೆಯುತ್ತಾರೆ.)

ಉದಾ: ಸಚಿವರು ಹೇಳಿದರು: “ಆಗಲಿ, ನಿಮ್ಮ ಶಾಲೆಯ ಕಟ್ಟಡಕ್ಕೆ ತಗಲುವ ವೆಚ್ಚದಲ್ಲಿ ಅರ್ಧವನ್ನು ಊರಿನವರು ಕೂಡಿಸುವುದಾದರೆ ನಾನು ಸರಕಾರದಿಂದ ಮಿಕ್ಕ ಅರ್ಧವನ್ನು ಕೊಡಿಸುತ್ತೇನೆ.”
ಈ ವಾಕ್ಯದ ಮೊದಲ ಭಾಗವನ್ನು ಕೊನೆಯಲ್ಲಿ --ಎಂದು ಸಚಿವರು ಹೇಳಿದರು, ಎಂದು ಬೇಕಾದರೆ ಬರೆಯಬಹುದು.
ಗ್ರಂಥಗಳ ಹೆಸರು, ಕವನಗಳ ಹೆಸರು, ಅಧ್ಯಾಯಗಳ ಹೆಸರು ಮುಂತಾದುವನ್ನು ಈ ಬಿಟ್ಟವುಗಳಲ್ಲಿ ಸೂಚಿಸಬಹುದು. “ಮಂದ್ರ” ಎಂಬ ಕಾದಂಬರಿ. “ಕಲ್ಕಿ” ಎಂಬ ಕವನ. “ವಿಗಡವಿಕ್ರಮರಾಯ” ಎಂಬ ನಾಟಕ.
ಗ್ರಾಮ್ಯ ಶಬ್ದಗಳನ್ನು ಈ ಚಿಹ್ನೆಯಿಂದ ತೋರಿಸಬಹುದು.

ಉದಾ: ‘ಸೂಳೆಮಗನೆ’, ಎಂದು ಬೈದವನನ್ನು ‘ಸಂಭಾವ್ಯ’, ಎಂದು ಕರೆಯಬಹುದೆ?
ದೀರ್ಘವಾದ ವಾಕ್ಯಗಳನ್ನು ತಿಳಿಸಬೇಕಾದಾಗ ಅವುಗಳನ್ನು ; ಚಿಹ್ನೆಯಿಂದ ಗುರುತಿಸುವುದು ಒಳ್ಳೆಯದು. 
ಈ ಉದಾರಸೂಚಕಗಳ ನಡುವೆ ಒಂದು ಸಂಪೂರ್ಣ ವಾಕ್ಯ ಬಂದರೆ ಆ ವಾಕ್ಯಕ್ಕೆ ಸಂಬಂಧಿಸಿದಂತೆ ಅದರ ಅಂತ್ಯದಲ್ಲಿ ಬರುವ ವಿರಾಮ ಚಿಹ್ನೆಗಳನ್ನು ಬರೆದ ಮೇಲೆ ಉದ್ಧಾರಕ ಚಿಹ್ನೆಯನ್ನು ಹಾಕಬೇಕು. 
ಉದಾ:
“ಈ ಶಬ್ದವು ಆ ಗ್ರಂಥದಲ್ಲಿ ಪ್ರಯೋಗವಾಗಿಲ್ಲ.”
“ನೀನೇನು ಮಹಾಪುರುಷನೋ!”
“ನಿನ್ನ ಮದುವೆ ಯಾವಾಗ?”
ಮೇಲೆ ತಿಳಿಸಿದ ಚಿಹ್ನೆಗಳು ತುಂಬ ಪ್ರಚಾರದಲ್ಲಿ ಇರುವ ಚಿಹ್ನೆಗಳು. ಆದರೆ, ಇವಲ್ಲದೆ ಗಣಿತಶಾಸ್ತ್ರದ ಕೆಲವು ಚಿಹ್ನೆಗಳನ್ನು ಭಾಷೆಯ ಸಂಬಂಧದಲ್ಲಿಯೇ ಉಪಯೋಗಿಸುತ್ತಾರೆ. ಅವು ವಿರಾಮ ಚಿಹ್ನೆಗಳಲ್ಲ. ಅವುಗಳಿಗೆ ಬೇರೆ ಅರ್ಥಗಳಿವೆ. ಅವುಗಳ ವಿವರಗಳು ಮುಂದೆ ಇವೆ:
* * * * *
+ ಇದು plus ಚಿಹ್ನೆ. 
ಕನ್ನಡದಲ್ಲಿ ವ್ಯಾಕರಣದ ಪಾಠಮಾಡುವಾಗ ರಾಮ + ಅನ್ನು = ರಾಮನನ್ನು ಎಂದು ಹೇಳುತ್ತಾರೆ. ಈ ವಾಕ್ಯದಲ್ಲಿ ಒಂದು plus ಚಿಹ್ನೆ, ಇನ್ನೊಂದು equals ಚಿಹ್ನೆ. ಅದಕ್ಕೆ ಕನ್ನಡದಲ್ಲಿ ಸಾಮಾನ್ಯವಾಗಿ ಅಧ್ಯಾಪಕರು plus ಮತ್ತು equals ಎಂದೇ ಉಪಯೋಗಿಸುತ್ತಾರೆ. + ಇದು ಸಂಕಲನ ಚಿಹ್ನೆ. ವ್ಯಾಕರಣ ಪಾಠ ಮಾಡುವಾಗ ‘ಜೊತೆಗೆ’ ಎಂಬುದಾಗಿ ಉಪಯೋಗಿಸಬಹುದು.
ರಾಮ ‘ಜೊತೆಗೆ’ ಅನ್ನು ಎಂಬುದು ರಾಮನನ್ನು ಎಂದಾಗುತ್ತದೆ. ಈ ವಾಕ್ಯ ದೊಡ್ಡದಾಗುವುದರಿಂದ ಅಧ್ಯಾಪಕರು ರಾಮ plus ಅದು equals ರಾಮನನ್ನು ಎಂದೇ ಹೇಳುತ್ತಾರೆ. ಆದ್ದರಿಂದ +, = ಈ ಚಿಹ್ನೆಗಳನ್ನು ನಾವು ಉಪಯೋಗಿಸಬೇಕು.
* * * * *
<, > ಎಂಬ ಎರಡು ಬೇರೆ ಚಿಹ್ನೆಗಳಿವೆ. ಇವುಗಳನ್ನು ಉಪಯೋಗಿಸುವ ಸಂದರ್ಭವನ್ನು ನೋಡಿ:
ಪರ್ವ > ಹಬ್ಬ 
ಸ್ವರ್ಗ > ಸಗ್ಗ 
ಬೇಹಾರ < ವ್ಯಾಪಾರ
ಬೇಸಾಯ < ವ್ಯವಸಾಯ
ಹೀಗೆ ಬರೆದರೆ ಹಬ್ಬ ಎಂಬ ಶಬ್ದ ಪರ್ವ ಶಬ್ದದಿಂದ ಬಂದಿದೆ ಎಂದು ಅರ್ಥ. ಮೊದಲನೆಯ ಶಬ್ದ ಪರ್ವ-ಸಂಸ್ಕೃತ. ಅದರಿಂದ ಬಂದ ಹಬ್ಬ ತದ್ಭವ. ವ್ಯಾಪಾರ ಎನ್ನುವ ಶಬ್ದ ಬೇಹಾರ ಎಂದು ಪಡೆಯುತ್ತದೆ. ಆಗ ನಾವು ಬೇಹಾರ < ವ್ಯಾಪಾರ ಎಂದು ತಿಳಿಸಬಹುದು. ಬೇಸಾಯ < ವ್ಯವಸಾಯ ಎಂದು ಬರೆಯಬಹುದು. ಈ ಚಿಹ್ನೆ > ಇದು ಯಾವ ಶಬ್ದದಿಂದ ಬಂದಿದೆ ಎಂದೂ; ಈ ಚಿಹ್ನೆ < ಯಾವ ಶಬ್ದ ಮೂಲ ಎಂದು ಅರ್ಥ ಮಾಡಿಕೊಳ್ಳಬೇಕು.
ನಿಘಂಟುಗಳಿಂದ ಶಬ್ದದ ವ್ಯುತ್ಪತ್ತಿಯನ್ನು ತಿಳಿಸುವಾಗ ಈ ಚಿಹ್ನೆಗಳನ್ನು ಉಪಯೋಗಿಸುತ್ತಾರೆ ಎಂದು ತಿಳಿದಿದ್ದಾರೆ ಒಳ್ಳೆಯದು.

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...