ಕರ್ಬೂಜ ಹಣ್ಣಿನ ಆರೋಗ್ಯ ಗುಣಗಳು ಗೊತ್ತಾದ್ರೆ, ದಿನಾ ತಿನ್ನುವಿರಿ!
ಬೇಸಿಗೆಯ ಸಮಯದಲ್ಲಿ ಹೆಚ್ಚಾಗಿ ಕಂಡು ಬಂದು ಹಲವರ ಬಾಯಲ್ಲಿ ನೀರೂರಿಸುವಂತಹ ಕರಬೂಜ ಹಣ್ಣು, ದೇಹಕ್ಕೆ ತಂಪನ್ನು ಒದಗಿಸುವುದರ ಜೊತೆಗೆ ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ಮನುಷ್ಯನಿಗೆ ತಂದು ಕೊಡುತ್ತದೆ. ಸೌತೆಕಾಯಿ, ಕಲ್ಲಂಗಡಿ, ಕುಂಬಳಕಾಯಿ ಜಾತಿಗೆ ಸೇರಿದ ಈ ಹಣ್ಣನ್ನು ಕೆಲ ದೇಶಗಳ ಕಡೆ ತರಕಾರಿ ಗುಂಪಿಗೆ ಸೇರಿಸುತ್ತಾರೆ. ಮೊದಲು ಪರ್ಷಿಯಾ ದೇಶದಲ್ಲಿ ರೈತರ ಜೀವನೋಪಾಯಕ್ಕೆ ಎಂದು ಬೆಳೆದ ಈ ಹಣ್ಣುಗಳು ನಂತರ ಕ್ರಮೇಣವಾಗಿ ಬ್ರೆಜಿಲ್, ಅಮೇರಿಕಾ ದೇಶಗಳಿಗೆ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡವು. ಈಗ ನಮ್ಮ ಭಾರತದಲ್ಲೇ ಪಂಜಾಬ್ ಪ್ರಾಂತ್ಯದಲ್ಲಿ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಆಂಧ್ರ ಪ್ರದೇಶಗಳಲ್ಲಿ ಹೆಚ್ಚಾಗಿ ಈ ಹಣ್ಣುಗಳನ್ನು ಬೆಳೆಯುತ್ತಾರೆ.
ತನ್ನಲ್ಲಿ ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ
ದೇಹದ ತೂಕ ಅಧಿಕವಾಗಿ ಬೊಜ್ಜು ಬೆಳೆಸಿಕೊಂಡು ಕಷ್ಟ ಪಡುತ್ತಾ ಇರುವವರು ಆಹಾರ ತಜ್ಞರ ಆಣತಿಯಂತೆ ಸಾಮಾನ್ಯವಾಗಿ ಕಡಿಮೆ ಕ್ಯಾಲೋರಿಗಳ ಸೇವನೆಗೆ ಒತ್ತು ಕೊಡುತ್ತಾರೆ. ಅಂತಹವರಿಗೆ ಹೇಳಿ ಮಾಡಿಸಿದ ಆಹಾರ ಪದಾರ್ಥವೆಂದರೆ ಅದು ಕರ್ಬುಜ ಹಣ್ಣು. ಏಕೆಂದರೆ ಕರ್ಬೂಜ ಹಣ್ಣಿನಲ್ಲಿ ಇತರ ಹಣ್ಣುಗಳಿಗೆ ಹೋಲಿಸಿದರೆ ಬಹಳಷ್ಟು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಆಹಾರ ಸೇವನೆಗಳ ಮಧ್ಯೆ ಹಸಿವೆಯಿಂದ ಬಳಲುವವರು ಕರ್ಬುಜ ಹಣ್ಣು ಸೇವನೆ ಮಾಡಬಹುದು. ಇದರಲ್ಲಿರುವ ಅತಿ ಹೆಚ್ಚಿನ ನೀರಿನ ಅಂಶ ಮನುಷ್ಯನ ದೇಹವನ್ನು ನಿರ್ಜಲೀಕರಣ ಆಗದಂತೆ ನೋಡಿಕೊಳ್ಳುತ್ತದೆ. ಜೊತೆಗೆ ಇದರಲ್ಲಿರುವ ಕಡಿಮೆ ಸಕ್ಕರೆ ಪ್ರಮಾಣದಿಂದ ನಮ್ಮ ದೇಹದ ಕ್ಯಾಲೋರಿಗಳನ್ನು ಹತೋಟಿಯಲ್ಲಿರುವಂತೆ ಮಾಡುತ್ತದೆ.
ಜೀರ್ಣಾಂಗಕ್ಕೆ ಬಹಳಷ್ಟು ಸಹಕಾರಿ
ಜೀರ್ಣಾಂಗದ ಅವ್ಯವಸ್ಥೆಯಿಂದ ಬಳಲಿ ಬೇಸತ್ತು ಅಜೀರ್ಣತೆ ಹಾಗೂ ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕರ್ಬುಜ ಹಣ್ಣು ಒಂದು ಒಳ್ಳೆಯ ಔಷಧೋಪಾಯದ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದರ ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಉಂಟಾದ ಅಸಿಡಿಟಿಯನ್ನು ದೂರ ಮಾಡಿ ಜೀರ್ಣ ಶಕ್ತಿಯನ್ನು ಹೆಚ್ಚುವಂತೆ ಮಾಡುತ್ತದೆ. ಕೆಲವು ಆಹಾರ ತಜ್ಞರ ಪ್ರಕಾರ ಕರ್ಬುಜ ಹಣ್ಣು ತನ್ನಲ್ಲಿನ ವಿಶಿಷ್ಟ ಗುಣ ಲಕ್ಷಣಗಳಿಂದ ಹೊಟ್ಟೆಗೆ ಸಂಬಂಧ ಪಟ್ಟ ಅನೇಕ ಸಮಸ್ಯೆಗಳನ್ನು ( ಹೊಟ್ಟೆಯ ಹುಣ್ಣು ಸೇರಿದಂತೆ ) ಇದರ ನಿತ್ಯ ನಿಯಮಿತ ಸೇವನೆಯಿಂದ ಸುಲಭವಾಗಿ ಬಗೆಹರಿಸುತ್ತದೆ.
ಮಲಬದ್ಧತೆಯನ್ನು ದೂರ ಮಾಡುತ್ತದೆ
ದೇಹದಲ್ಲಿ ನಾರಿನ ಅಂಶದ ಕೊರತೆ ಉಂಟಾದಾಗ ಸಹಜವಾಗಿಯೇ ಮನುಷ್ಯನಿಗೆ ಮಲಬದ್ಧತೆಯ ಸಮಸ್ಯೆ ಕಾಡುತ್ತದೆ. ಆದರೆ ಕರ್ಬುಜ ಹಣ್ಣಿನ ಸೇವನೆಯಿಂದ ಅದರಲ್ಲಿರುವ ಯಥೇಚ್ಛವಾದ ನಾರಿನ ಅಂಶಗಳು ನೈಸರ್ಗಿಕ ವಿರೇಚಕಗಳಾಗಿ ಕೆಲಸ ಮಾಡಿ ದೇಹಕ್ಕೆ ಅಗತ್ಯ ಪ್ರಮಾಣದ ನಾರಿನ ಅಂಶಗಳನ್ನು ಒದಗಿಸುವುದರ ಜೊತೆಗೆ ಮಲಬದ್ಧತೆಯ ಗುಣ ಲಕ್ಷಣಗಳನ್ನು ಮಾಯವಾಗಿಸುತ್ತದೆ. ಕೆಲವರು ಮಲ ವಿಸರ್ಜನೆಯ ಸಮಯದಲ್ಲಿ ಬಹಳಷ್ಟು ಕಷ್ಟ ಪಡುತ್ತಾರೆ. ಅದಕ್ಕೆ ಕಾರಣ ಅವರ ಆಹಾರ ತ್ಯಾಜ್ಯ ಬಹಳಷ್ಟು ಗಟ್ಟಿಯಾಗಿರುತ್ತದೆ. ಇಂತಹ ಸಮಸ್ಯೆಯನ್ನು ಕರ್ಬುಜ ಹಣ್ಣು ಸುಲಭವಾಗಿ ನಿವಾರಣೆ ಮಾಡುತ್ತದೆ. ಇದೇ ಕಾರಣದಿಂದ ಹಲವಾರು ಆರೋಗ್ಯ ತಜ್ಞರು ಮತ್ತು ವೈದ್ಯರು ಅಧಿಕ ನೀರಿನಂಶವಿರುವ ಆಹಾರಗಳನ್ನು ಜೊತೆಗೆ ಹೆಚ್ಚಿನ ನಾರಿನಂಶ ಇರುವ ಆಹಾರ ಪದಾರ್ಥಗಳನ್ನು ಸೇವಿಸಲು ಸೂಚನೆ ನೀಡುತ್ತಾರೆ.
ರಕ್ತದ ಒತ್ತಡವನ್ನು ನಿಯಂತ್ರಣ ಮಾಡುತ್ತದೆ
ಮನುಷ್ಯನಿಗೆ ದೇಹದಲ್ಲಿ ರಕ್ತದ ಒತ್ತಡದ ಸಮಸ್ಯೆ ಹತೋಟಿಗೆ ಬರಬೇಕಾದರೆ ಮೊದಲು ಎಲೆಕ್ಟ್ರೋಲೈಟ್ ಗಳು ಸಮತೋಲನ ಆಗಬೇಕು. ಇದರಿಂದ ರಕ್ತ ಸಂಚಾರ ಸುಗಮವಾಗಿ ದೇಹದಲ್ಲಿ ರಕ್ತದ ಒತ್ತಡ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಪೊಟ್ಯಾಶಿಯಂ ಖನಿಜಾಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ ಯಾವುದೇ ಆಹಾರ ಈ ಕೆಲಸವನ್ನು ಸುಲಭವಾಗಿ ಮಾಡುತ್ತದೆ. ಕರ್ಬೂಜ ಹಣ್ಣಿನಲ್ಲಿ ಪೊಟ್ಯಾಷಿಯಂ ಅಂಶ ಬಹಳಷ್ಟು ಹೆಚ್ಚಾಗಿದ್ದು, ಇದು ಮನುಷ್ಯನ ದೇಹದಲ್ಲಿ ರಕ್ತದ ಅಸಮರ್ಪಕ ಸಂಚಾರದಿಂದ ಉಂಟಾಗುವ ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಪಾರ್ಶ್ವವಾಯು ಸಮಸ್ಯೆಗಳನ್ನು ಭವಿಷ್ಯದಲ್ಲಿ ಎದುರಾಗದಂತೆ ನೋಡಿಕೊಳ್ಳುತ್ತದೆ.
ಕರ್ಬುಜ ಹಣ್ಣು ಮೂತ್ರವರ್ಧಕ ಸಹ ಹೌದು
ಕರ್ಬೂಜ ಹಣ್ಣಿನಲ್ಲಿ ಮೂತ್ರವರ್ಧಕ ಏಜೆಂಟ್ ಇದ್ದು, ಇದು ಮನುಷ್ಯನ ದೇಹದಿಂದ ವಿಷಕಾರಿ ಅಂಶಗಳನ್ನು ಮತ್ತು ಅವಶ್ಯವಿಲ್ಲದ ಹೆಚ್ಚಿನ ನೀರಿನ ಅಂಶವನ್ನು ಹೊರ ಹಾಕುತ್ತದೆ. ಇದರಿಂದ ಮೂತ್ರ ಪಿಂಡದ ಸಮಸ್ಯೆಗಳು ದೂರಾಗಿ ಕಿಡ್ನಿಗಳು ಆರೋಗ್ಯವಾಗಿ ಕೆಲಸ ಮಾಡಲು ಸಹಾಯಕವಾಗುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ನಾವು ಸೇವಿಸಿದ ಆಹಾರ ಪದಾರ್ಥಗಳು ಸರಿಯಾಗಿ ಪರಿಷ್ಕರಣೆ ಆಗದೆ ಮೂತ್ರ ಪಿಂಡಗಳಲ್ಲಿ ಘನಾಕಾರ ಪಡೆದುಕೊಂಡು ಮೂತ್ರ ಪಿಂಡದ ಕಲ್ಲುಗಳಾಗಿ ಮಾರ್ಪಾಡಾಗುತ್ತವೆ. ಇದರಿಂದಲೂ ಸಹ ನಾವು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಆದರೆ ಕರ್ಬುಜ ಹಣ್ಣುಗಳ ನಿಯಮಿತ ಸೇವನೆಯಿಂದ ಇಂತಹ ಪ್ರಕರಣಗಳು ತೀರಾ ಕಡಿಮೆಯಾಗುತ್ತವೆ.
ಆಂಟಿ - ಆಕ್ಸಿಡೆಂಟ್ ಗಳ ಮಹಾಪೂರವೇ ಕರ್ಬುಜ ಹಣ್ಣು
ಮನುಷ್ಯನ ದೇಹದ ಸಂಪೂರ್ಣ ಆರೋಗ್ಯ ವೃದ್ಧಿಗಾಗಿ ಆಂಟಿ - ಆಕ್ಸಿಡೆಂಟ್ ಗಳು ಬಹಳಷ್ಟು ಅವಶ್ಯಕವಾಗಿವೆ. ಚರ್ಮದ ಹೊಳಪು, ಕಣ್ಣಿನ ಆರೋಗ್ಯ ಮೂಳೆಗಳ ಬಲ ಇತ್ಯಾದಿ ಕೆಲಸಗಳು ಆಂಟಿ - ಆಕ್ಸಿಡೆಂಟ್ ಗಳ ಸಹಯೋಗದಿಂದ ಆಗುತ್ತವೆ. ಬೀಟಾ - ಕ್ಯಾರೋಟಿನ್, ಫೋಲಿಕ್ ಆಸಿಡ್, ಪೊಟ್ಯಾಶಿಯಂ, ವಿಟಮಿನ್ ' ಸಿ ' ಮತ್ತು ವಿಟಮಿನ್ ' ಎ ' ಅಂಶಗಳು ಕರ್ಬೂಜ ಹಣ್ಣಿನಲ್ಲಿ ಸಾಕಷ್ಟಿವೆ. ಅದರಲ್ಲೂ ವಿಟಮಿನ್ ' ಎ ' ಅಂಶದಿಂದ ಮನುಷ್ಯನ ದೇಹಕ್ಕೆ ಬಹಳಷ್ಟು ಉಪಯೋಗಗಳಿವೆ. ಮೂಕಸ್ ಮೆಂಬ್ರೇನ್ ಆರೋಗ್ಯವನ್ನು ಕಾಪಾಡುವಲ್ಲಿ ಈ ಅಂಶ ಸಹಾಯಕ್ಕೆ ಬರುತ್ತದೆ.
ಕರ್ಬೂಜ ಹಣ್ಣಿನಲ್ಲಿ ಕ್ಯಾನ್ಸರ್ ವಿರೋಧಿ ಗುಣ ಲಕ್ಷಣಗಳಿವೆ
ಕರ್ಬೂಜ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದ flavonoid ಗಳಾದ ' ಲ್ಯೂಟೀನ್', ' zeaxanthin 'ಮತ್ತು ' cryptoxanthin 'ಎಂಬ ಅಂಶಗಳಿವೆ. ಇವು ಮನುಷ್ಯನ ದೇಹದಲ್ಲಿ ಶಕ್ತಿಯುತವಾದ ಆಂಟಿ - ಆಕ್ಸಿಡೆಂಟ್ ಏಜೆಂಟ್ ಗಳಾಗಿ ಕೆಲಸ ಮಾಡುತ್ತವೆ. ಈ ಆಂಟಿ - ಆಕ್ಸಿಡೆಂಟ್ ಗಳು ದೇಹದ ಕೋಶಗಳನ್ನು ಮತ್ತು ಇತರ ಅಂಗ ರಚನೆಗಳನ್ನು ರಕ್ಷಿಸಿ ಫ್ರೀ ರಾಡಿಕಲ್ ಗಳ ಹಾವಳಿಯಿಂದ ದೇಹಕ್ಕೆ ಉಂಟಾಗುವ ಹಾನಿಯನ್ನು ತಪ್ಪಿಸುತ್ತವೆ. ಆದ್ದರಿಂದ ಕರ್ಬುಜ ಹಣ್ಣಿನ ಸೇವನೆಯಿಂದ ಕರುಳಿನ, ಪ್ರೊಸ್ಟೇಟ್, ಶ್ವಾಸಕೋಶ, ಪ್ಯಾಂಕ್ರಿಯಾಸ್, ಎಂಡೋಮೆಟ್ರಿಯಲ್ ಮತ್ತು ಸ್ತನ ಕ್ಯಾನ್ಸರ್ ಸಮಸ್ಯೆಗಳಿಂದ ದೂರಾಗಬಹುದು.
ಹೊಟ್ಟೆ ಹುಣ್ಣು, ಗ್ಯಾಸ್ಟ್ರಿಕ್, ಅಸಿಡಿಟಿ ಸಮಸ್ಯೆಗಳಿಗೂ ರಾಮಬಾಣ
ಇಷ್ಟೇ ಅಲ್ಲದೆ ಕರ್ಬುಜ ಹಣ್ಣುಗಳಿಂದ ಮನುಷ್ಯನಿಗೆ ಇನ್ನು ಹೆಚ್ಚಿನ ಸಹಾಯಗಳಾಗುತ್ತವೆ. ಹೊಟ್ಟೆ ಹಸಿವು ನಿವಾರಣೆ, ಮೂತ್ರನಾಳದ ಸೋಂಕು ಗಳು ಮತ್ತು ಹುಣ್ಣುಗಳು, ಹೊಟ್ಟೆ ಹುಣ್ಣು, ಗ್ಯಾಸ್ಟ್ರಿಕ್, ಅಸಿಡಿಟಿ ಮತ್ತು ಕಿಡ್ನಿ ಕಲ್ಲುಗಳು ರೂಪುಗೊಳ್ಳುವುದನ್ನು ಕರ್ಬುಜ ಹಣ್ಣು ಆರಂಭದಲ್ಲಿಯೇ ತಡೆಯುತ್ತದೆ. ಆದ್ದರಿಂದ ನಿಮಗೆ ಎಂದಾದರೂ ಹಸಿವಾದಾಗ ಮೊದಲು ಕರ್ಬುಜ ಹಣ್ಣಿನ ಸೇವನೆಗೆ ಒತ್ತು ಕೊಡಿ. ನಂತರ ನಿಮ್ಮ ದೇಹಕ್ಕೆ ಆಗುವ ಆರೋಗ್ಯ ಚಮತ್ಕಾರಗಳನ್ನು ನೀವೇ ನೋಡಿ.