
ಮುನ್ನೆಚ್ಚರಿಕೆಯಾಗಿತ್ತಾ ಚಿತ್ರ?

ಬಹುಶಃ ನಾವು ಒದಿಕೊಂಡಂತೆ ರವಿ ಕಾಣದ್ದನ್ನು ಕವಿ ಕಂಡ ಎನ್ನುವ ಮಾತಿನಂತೆ, ವೈದ್ಯರು ಕಾಣದ್ದನ್ನು ಸಿನಿಮಾ ನಿರ್ದೇಶಕರು ಕಂಡರಾ ಎನ್ನುವಂತಿದೆ. ಯಾಕಂದ್ರೆ ಈಗಿರುವ ಕೊರೊನಾ ವೈರಸ್‌ನ ಉಲ್ಲೇಖವಿಲ್ಲದಿದ್ರೂ, ಚಿತ್ರದ ವೈರಸ್ ಬಹುತೇಕ ಕೊರೊನಾವನ್ನೇ ಹೋಲುತ್ತೆ. ಹಾಗೇನಾ ಈಗ ನಡೆಯುತ್ತಿರುವ ಘಟನೆಗಳೆಲ್ಲಾ ಚಿತ್ರದಲ್ಲಿ ಬಂದು ಹೋಗುವ ಘಟನೆಗಳನ್ನೇ ಹೋಲುತ್ತಿರೋದು ಕಾಕತಾಳಿಯವಾ ಅಥವಾ ಮುನ್ನೆಚ್ಚರಿಕೆಯ ಗಂಟೆಯಾಗಿತ್ತಾ ಅನ್ನೋ ಅನುಮಾನ ಚಿತ್ರ ನೋಡಿದವರಲ್ಲಿ ಬಂದಿದ್ದರೇ ಅಚ್ಚರಿಯೇನಿಲ್ಲ. ಅಷ್ಟರಮಟ್ಟಿಗೆ ಆ ಸಿನಿಮಾ ಕರಾರುವಕ್ಕಾಗಿ ಮೂಡಿಬಂದಿತ್ತು.
ವೈಜ್ಞಾನಿಕ ಚಿತ್ರಗಳು ಮತ್ತು ಹಾಲಿವುಡ್
ಹೌದು, 2011ರಲ್ಲಿ ತೆರೆಕಂಡ ಕಂಟೇಜಿಯನ್ ಚಿತ್ರ ಬಹುತೇಕ ಕೊರೊನಾವೈರಸ್‌ನ್ನೇ ಹೋಲುವಂಥ ಸಾಂಕ್ರಾಮಿಕ ರೋಗದ ಬಗ್ಗೆ ಇದೆ. ವೈಜ್ಞಾನಿಕ ಚಿತ್ರಗಳನ್ನು ದೊಡ್ಡ ಪರದೆ ಮೇಲೆ ನೈಜ ರೀತಿಯಲ್ಲಿ ಚಿತ್ರಿಸುವಲ್ಲಿ ಹಾಲಿವುಡ್‌ಗೆ ಹಾಲಿವುಡ್ಡೇ ಸಾಟಿ. ಅತ್ಯಾಧುನಿಕ ತಂತ್ರಜ್ಞಾನ, ಆರ್ಥಿಕ ನೆರವು ಮತ್ತು ಇಡಿ ಜಗತ್ತಿನಾದ್ಯಂತ ಮಾರುಕಟ್ಟೆ ಹೊಂದಿರುವ ಹಾಲಿವುಡ್, ಸೈನ್ಸ್ ಫಿಕ್ಷನ್ ಚಿತ್ರಗಳನ್ನ ವೀಕ್ಷಕರಿಗೆ ನೈಜವಾಗಿ ಉಣಬಡಿಸುವಲ್ಲಿ ಎತ್ತಿದ ಕೈ. ಇದಕ್ಕೆ ಉದಾಹರಣೆಗಳೆಂದರೆ ಸ್ಟೀವನ್ ಸ್ಪಿಲ್‌ಬರ್ಗ್ ‘ಈಟಿ’, ರಿಚರ್ಡ್ ಅಟೆನ್‌ಬರ್ಗ್‌ರ, ‘ಜುರಾಸಿಕ್ ಪಾರ್ಕ್’, ‘ಔಟ್ ಬ್ರೇಕ್’ ಮತ್ತು ‘ಡೇ ಆಫ್ಟರ್ ಟೂಮಾರೋ’ ಅಂತಹ ಅದ್ಭುತ ಚಿತ್ರಗಳು.
ಕೊರೊನಾದಂಥದ್ದೇ ಕತೆ ಹೊಂದಿರುವ ಕಂಟೇಜಿಯನ್ ಚಿತ್ರ

ಇಂಥ ಚಿತ್ರಗಳ ಸಾಲಿಗೆ ಸೇರುವ ಸ್ಟೀವನ್ ಸೋಡೇನ್‌ಬರ್ಗ್‌ರ ‘ಕಂಟೇಜಿಯನ್’ ಸಾಂಕ್ರಮಿಕ ರೋಗ ಕ್ಷಿಪ್ರಗತಿಯಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುವ ಮತ್ತು ಅದರಿಂದ ಆಗುವ ಘೋರ ಪರಿಣಾಮಗಳು, ಇವೆಲ್ಲವುಗಳ ನಡುವೆ ತೆರೆದುಕೊಳ್ಳುವ ಮಾನವ ಸಂಬಂಧಗಳು ಮತ್ತು ವರ್ತನೆಗಳನ್ನ ಮನಮುಟ್ಟುವಂತೆ ತೆರೆದಿಡುತ್ತದೆ.
ಬೆತ್ ಎಮ್‌ಹಾಫ್ ಎನ್ನವ ಮಲ್ಟಿನ್ಯಾಶನಲ್ ಕಂಪನಿ ಉದ್ಯೋಗಿ ಹಾಂಕಾಂಗ್‌ನಿಂದ ಅಮೆರಿಕದ ತನ್ನ ಊರು ಮಿನಿಯಾಪೊಲಿಸ್‌ಗೆ ಹಿಂದಿರುಗುವುದರೊಂದಿಗೆ ಕಥೆ ಮತ್ತು ಸಾಂಕ್ರಾಮಿಕ ವೈರಸ್ ಅನಾವರಣಗೊಳ್ಳುತ್ತಾ ಹೋಗುತ್ತದೆ. ಕೆಲ ದಿನಗಳಲ್ಲಿಯೇ ಆಕೆ ವೈರಸ್‌ನಿಂದ ಸಾಯುವುದಲ್ಲದೇ ಆಕೆಯ ಸಂಪರ್ಕಕ್ಕೆ ಬಂದ ಎಲ್ಲರೂ ಸಾವನ್ನಪ್ಪುತ್ತಾರೆ. ಆದ್ರೆ ಆಕೆಯ ಗಂಡ ಮಾತ್ರ ಯಾವುದೇ ತೊಂದರೆಯಾಗದೇ ಆರಾಮವಾಗಿರುತ್ತಾನೆ. ಯಾಕಂದ್ರೆ ಆತನ ರೋಗ ನಿರೋಧಕ ಶಕ್ತಿ ವೈರಸ್‌ಗಿಂತ ಬಲಿಷ್ಟವಾಗಿರುತ್ತೆ.

ವೈರಸ್ ಭಯಾನಕತೆಗಳ ಅನಾವರಣ
ಹೀಗೆ ವೈರಸ್ ಜಗತ್ತಿನಾದ್ಯಂತ ತನ್ನ ರುದ್ರನರ್ತನವನ್ನ ಆರಂಭಿಸುತ್ತಿದ್ದಂತೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಮೆರಿಕದ ಸಾಂಕ್ರಾಮಿಕ ರೋಗ ತಡೆ ಮತ್ತು ನಿರೋಧಕ ಸಂಸ್ಥೆ ರೋಗದ ಪತ್ತೆ ಮತ್ತು ಅದನ್ನು ತಡೆಯಬಹುದಾದ ಸಾಧ್ಯತೆಗಳ ಕುರಿತು ತನಿಖೆ ಮತ್ತು ಚಿಕಿತ್ಸೆ ಕುರಿತು ತಲೆಬಿಸಿಮಾಡಿಕೊಳ್ಳಲಾರಂಭಿಸುತ್ತವೆ. ನುರಿತ ತಜ್ಞರನ್ನ ವೈರಸ್‌ನ ಮೂಲ ಸ್ಥಳಕ್ಕೆ ತನಿಖೆಗೆ ಕಳಿಸಿದ್ರೆ, ಇನ್ನುಳಿದವರು ಅದನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತಾರೆ. ಇನ್ನು ಕೆಲವರು ಈ ಭಯಂಕರ ಹೆಮ್ಮಾರಿಗೆ ಔಷಧ ಕಂಡು ಹಿಡಿಯುವ ಪ್ರಯತ್ನದಲ್ಲಿ ತೊಡಗುತ್ತಾರೆ.
ವೈದ್ಯರು ಮತ್ತು ವಿಜ್ಞಾನಿಗಳ ಹೋರಾಟದ ಅನಾವರಣ
ಈ ಪ್ರಯತ್ನದಲ್ಲಿ ಕೆಲವರು ವೈರಸ್‌ನಿಂದಾಗಿಯೇ ಪ್ರಾಣ ತೆತ್ತರೆ, ಕೆಲ ಅವಕಾಶವಾದಿಗಳು ಮುಗ್ಧ ಜನತೆಯ ದಾರಿ ತಪ್ಪಿಸಿ ಹೆಸರು ಮತ್ತು ಹಣ ಗಳಿಸಲು ತಪ್ಪು ಮಾಹಿತಿ ಹರುಡುತ್ತಾರೆ. ಮತ್ತೊಂದೆೆಡೆ ಸತತ ಪ್ರಯತ್ನಗಳ ನಂತರ ತಜ್ಞರು ಎಂಇವಿ-1 ವೈರಸ್‌ಗೆ ಔಷಧಿಯನ್ನ ಕಂಡುಹಿಡಿಯುತ್ತಾರೆ. ಅದಕ್ಕಾಗಿ ಒಬ್ಬ ವೈದ್ಯ ವಿಜ್ಞಾನಿ ತನ್ನ ಮೇಲೆಯೇ ಔಷಧಿಯನ್ನ ಪ್ರಯೋಗಿಸಿಕೊಳ್ಳುತ್ತಾಳೆ.

ಇದಕ್ಕೆ ಪ್ರೇರಣೆ ಎನ್ನುವಂತೆ ಈ ಹಿಂದೆ ಒಬ್ಬ ವಿಜ್ಞಾನಿ ಬ್ಯಾಕ್ಟೀರಿಯಾಗೆ ಔಷಧಿ ಸಂಶೋಧಿಸಲು ತನ್ನ ಮೇಲೆಯೇ ನಡೆಸಿದ ಪ್ರಯೋಗವನ್ನು ಉಲ್ಲೇಖಿಸುತ್ತಾಳೆ. ಈ ಮೂಲಕ ವೈದ್ಯರ ನಿಸ್ವಾರ್ಥ ಸೇವೆ ಮತ್ತು ಶ್ರಮಗಳನ್ನ ಪರಿಚಯಿಸುತ್ತಾಳೆ. ಅಂತಿಮವಾಗಿ ವೈರಸ್‌ಗೆ ಔಷಧಿಯ ಪತ್ತೆ ಮತ್ತು ಅದರ ಉತ್ಪಾದನೆ ಮತ್ತು ಸಾಂಕೇತಿಕವಾಗಿ ಮೊದಲ ಹಂತದಲ್ಲಿ ಫ್ರಂಟ್‌ಲೈನ್ ಕಾರ್ಯಕರ್ತರಿಗೆ ಔಷಧಿಯನ್ನ ವಿತರಿಸುವುದರೊಂದಿಗೆ ಚಿತ್ರ ಮುಗಿಯುತ್ತದೆ.
ಮಾನವನ ದೌರ್ಬಲ್ಯ ಮತ್ತು ಹಣದ ದಾಹದ ಅನಾವರಣ

ಆದ್ರೆ ಈ ಮೂಲಕ ಕೊರೊನಾವನ್ನ ಹೋಲುವ ಎಂಇವಿ-1 ಮತ್ತು ಅದರ ರೌದ್ರಾವತಾರ, ಅದಕ್ಕೆ ಸಿಲುಕಿ ನಲುಗುವ ಜಗತ್ತು, ವಿಜ್ಞಾನಿಗಳ ಹೋರಾಟ, ವೈದ್ಯರ ನಿಸ್ವಾರ್ಥ ಸೇವೆ, ಅವಕಾಶವಾದಿಗಳ ಸ್ವಾರ್ಥ, ಮಲ್ಟಿನ್ಯಾಶನಲ್ ಕಂಪನಿಗಳ ವ್ಯಾಪಾರ ಗುಟ್ಟು ಹಾಗೇನೆ ಜನರ ಹಾಹಾಕಾರ, ಅದರ ದುರುಪಯೋಗ, ಇವೆಲ್ಲವುಗಳ ಜತೆಗೆ ಈ ವೈರಸ್‌ನ್ನ ಜೈವಿಕ ಅಸ್ತ್ರವನ್ನಾಗಿ ದೇಶ-ದೇಶಗಳ ನಡುವಿನ ಪೈಪೋಟಿಯಲ್ಲಿ ಬಳಸಲಾಗ್ತಿದೆಯಾ ಎನ್ನೋ ಅನುಮಾನವನ್ನ ಎಲ್ಲಿಯೂ ಹೇಳದಿದ್ರೂ, ಜತೆ ಜತೆಗೆ ವ್ಯಕ್ತಪಡಿಸುವ ಈ ಚಿತ್ರ ಕೊರೊನಾ ಕುರಿತು ಮುನ್ನೆಚ್ಚರಿಕೆ ಕೊಟ್ಟಂತಿದೆ. ಎಲ್ಲಿಯೂ ಅಬ್ಬರವಿಲ್ಲ, ಕೃತಕವೂ ಆಗದೇ, ಸಹಜವಾಗಿ ನಮ್ಮ ಕಣ್ಮುಂದೆ ನಡೆಯುತ್ತಿರುವ ಘಟನೆಗಳಂತೆ ಚಿತ್ರ ವೈರಸ್ ಮತ್ತು ಅದರ ಪರಿಣಾಮಗಳ ಕುರಿತು ಅನಾವರಣಗೊಳಿಸುತ್ತದೆ