ಕೊವಿಡ್ 19 ರೋಗಕ್ಕೆ ಔಷಧ ಕಂಡು ಹಿಡಿಯುವವರೆಗೂ ಮಾಸ್ಕ್ ಧರಿಸಲೇಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದಷ್ಟೇ ಅಲ್ಲದೆ ಬೇರೆಯವರಿಂದ 2 ಮೀಟರ್ ಅಂತರ ಕಾಯ್ದುಕೊಳ್ಳಬೇಕು ಎಂದರು.
ನಾವೆಲ್ಲರೂ ಏರು-ಪೇರುಗಳನ್ನು ಕಂಡಿದ್ದೇವೆ, ನಮ್ಮ ಸಾಮಾಜಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಒಂದೇ ಸಮಯದಲ್ಲಿ ಇಡೀ ಜಗತ್ತು ಇಂತಹ ಒಂದು ದೊಡ್ಡ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಯಾರೂ ಅಂದುಕೊಂಡಿಲಿಲ್ಲ.
ಕೊರೊನಾ ಸಂಕಷ್ಟದ ಸಮಯದಲ್ಲಿ ಉತ್ತರ ಪ್ರದೇಶವು ಧೈರ್ಯ ಮತ್ತು ಆತ್ಮಸ್ಥೈರ್ಯವನ್ನು ತೋರಿದೆ. ಕೊರೊನಾವೈರಸ್ ವಿರುದ್ಧ ಹೋರಾಡಿ ಯಶಸ್ಸು ಸಾಧಿಸಿದ ರೀತಿಯು ಅತ್ಯದ್ಭುತವಾಗಿದೆ ಎಂದು ಹೇಳಿದರು.
ಯಾವಾಗ ನಾವು ಈ ಸಾಂಕ್ರಾಮಿಕ ರೋಗದಿಂದ ಮುಕ್ತ ಪಡೆಯುತ್ತೇವೆ ಎಂಬುದು ಯಾರಿಗೂ ತಿಳಿದಿಲ್ಲ. ಎಲ್ಲಿಯವರೆಗೆ ಔಷಧ ಅಭಿವೃದ್ಧಿಪಡಿಸಲಾಗುವುದಿಲ್ಲವೋ ಅಲ್ಲಿಯವರೆಗೆ ಎರಡು ಮೀಟರ್ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಮಾಹಿತಿ ನೀಡಿದರು.
ಭಾರತದಲ್ಲಿ ಒಂದೇ ದಿನ 17,296 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.ಕಳೆದ 24 ಗಂಟೆಗಳಲ್ಲಿ 407 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಒಟ್ಟು 4,90,401 ಕೊರೊನಾ ಸೋಂಕಿತ ಪ್ರಕರಣಗಳಿವೆ. ಅದರಲ್ಲಿ 1,89,463 ಪ್ರಕರಣಗಳು ಸಕ್ರಿಯವಾಗಿವೆ.
ಇದುವರೆಗೆ 2,85,637ಮಂದಿ ಗುಣಮುಖರಾಗಿದ್ದಾರೆ. ಒಟ್ಟು 15,301 ಮಂದಿ ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ