ಹೊಸದಿಲ್ಲಿ, ಜೂ.28: ದೇಶದ ಜನತೆ ಸ್ಥಳೀಯ ಉತ್ಪನ್ನಗಳನ್ನೇ ಖರೀದಿಸುವುದರ ಜೊತೆಗೆ, ಹೀಗೆ ಮಾಡಲು ಇತರರಿಗೆ ಪ್ರೇರಣೆ ನೀಡಿದರೆ ಅವರು ದೇಶವನ್ನು ಬಲಿಷ್ಟಗೊಳಿಸುವ ಪ್ರಕ್ರಿಯೆಯಲ್ಲಿ ಮಹತ್ತರ ಕೊಡುಗೆ ನೀಡಿದಂತಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಾನುಲಿ ಮೂಲಕ ದೇಶವನ್ನುದ್ದೇಶಿಸಿ ಮಾಡುವ ಮನ್‌ಕಿ ಬಾತ್ ಕಾರ್ಯಕ್ರಮದಲ್ಲಿ ಮೇಡ್ ಇನ್ ಇಂಡಿಯಾ ಅಭಿಯಾನದ ಪರ ಧ್ವನಿ ಎತ್ತಿದ ಮೋದಿ, ಕೊರೋನ ವೈರಸ್‌ನ ಪ್ರಹಾರಕ್ಕೆ ಸಿಲುಕಿರುವ ಅರ್ಥವ್ಯವಸ್ಥೆಗೆ ಚೇತರಿಕೆ ನೀಡುವ ಉದ್ದೇಶದ ಆತ್ಮನಿರ್ಭರ ಭಾರತ(ಸ್ವಾವಲಂಬಿ ಭಾರತ) ಪರಿಕಲ್ಪನೆಗೆ ಮೇಡ್ ಇನ್ ಇಂಡಿಯಾ ಅಭಿಯಾನ ಪೂರಕವಾಗಿದೆ ಎಂದರು.ಸ್ಥಳೀಯ ಉತ್ಪನ್ನಗಳ ಪರ ಧ್ವನಿ ಎತ್ತಬೇಕು, ಅವುಗಳ ಖರೀದಿಗೆ ಇತರರನ್ನು ಪ್ರೇರೇಪಿಸಬೇಕು. ಹೀಗೆ ಮಾಡುವುದು ಕೂಡಾ ದೇಶದ ಸೇವೆಯಾಗುತ್ತದೆ.
ದೇಶವನ್ನು ಸ್ವಾವಲಂಬಿಯಾಗಿಸಿದರೆ ನಮ್ಮ ವೀರಯೋಧರನ್ನು ಗೌರವಿಸಿದಂತಾಗುತ್ತದೆ . ದೇಶದ ಗಡಿಪ್ರದೇಶವನ್ನು ಕಾಪಾಡುವಲ್ಲಿ ದೇಶದ ಶಕ್ತಿ ಮತ್ತು ಸಾಮರ್ಥ್ಯವನ್ನು ವೃದ್ಧಿಸಬೇಕಿದೆ . ಗಡಿಪ್ರದೇಶದಲ್ಲಿ ನಮ್ಮ ಭೂಪ್ರದೇಶದತ್ತ ಕಣ್ಣು ಹಾಕುವವರಿಗೆ ಸೂಕ್ತ ಉತ್ತರ ನೀಡಲಾಗಿದೆ. ದೇಶದ ರಕ್ಷಣೆಯ ವಿಷಯ ಬಂದಾಗ ನಮ್ಮ ವೀರ ಯೋಧರು ಪ್ರಾಣವನ್ನು ಲೆಕ್ಕಿಸದೆ ಹೋರಾಡುತ್ತಾರೆ ಎಂಬುದು ಮತ್ತೊಮ್ಮೆ ವಿಶ್ವಕ್ಕೆ ಸಾಬೀತಾಗಿದೆ ಎಂದು ಮೋದಿ ಶ್ಲಾಘಿಸಿದರು.
ವಿಶ್ವಾಸ ಮತ್ತು ಸ್ನೇಹಕ್ಕೆ ಗೌರವ ನೀಡುವುದು ಭಾರತದ ಸಂಪ್ರದಾಯವಾಗಿದೆ. ಸಹೋದರತ್ವ ಭಾರತದ ಆತ್ಮವಾಗಿದೆ. ಸ್ವಾತಂತ್ರಪೂರ್ವದಲ್ಲಿ ಭಾರತದಲ್ಲಿ ಹಲವು ಯುದ್ಧೋಪಕರಣಗಳ ಕಾರ್ಖಾನೆಯಿತ್ತು. ಆಗ ನಮಗಿಂತ ಬಹಳ ಹಿಂದೆ ಇದ್ದ ಕೆಲವು ರಾಷ್ಟ್ರಗಳು ಈಗ ನಮ್ಮನ್ನು ಹಿಂದೆ ಹಾಕಿವೆ. ರಕ್ಷಣಾ ಉಪಕರಣಗಳ ಕ್ಷೇತ್ರದಲ್ಲಿಯೂ ಸ್ವಾವಲಂಬನೆ ಸಾಧಿಸುವ ಗುರಿ ಹೊಂದಲಾಗಿದೆ ಎಂದು ಮೋದಿ ಹೇಳಿದರು.