ನಾಗರಸ ಕವಿಯ 'ಕರ್ಣಾಟಕ ಭಗವದ್ಗೀತೆ' - ಒಂದು ಪರಿಚಯ
ಈಚೆಗೆ ಒಂದೆರೆಡು ಅಪರೂಪದ ಕನ್ನಡ ಕೃತಿಗಳಿಗಾಗಿ ಬಹುತೇಕ ಎಲ್ಲ ಪುಸ್ತಕ ಮಳಿಗೆಗಳಲ್ಲೂ ನನ್ನ ಹುಡುಕಾಟ ಸಾಗಿತ್ತು. ಆದರೆ ಎಲ್ಲಿಯೂ ಅವುಗಳ ಪತ್ತೆಯೇ ಇಲ್ಲ..! ಇಲ್ಲಾದರೂ ಅವುಗಳು ಲಭ್ಯವಿದೆಯೋ ಎಂಬ ಆಸೆಯಿಂದ ಬೆಂಗಳೂರಿನ 'ನವಕರ್ನಾಟಕ ಪ್ರಕಾಶನ'ದ ಮಳಿಗೆಯನ್ನು ಹೊಕ್ಕೆ. ನನ್ನ ದುರಾದೃಷ್ಟ, ಅಲ್ಲಿಯೂ ಆ ಕೃತಿಗಳು ಲಭ್ಯವಿರಲಿಲ್ಲ.!!
ಹಾಗೇ ಅಲ್ಲಿದ್ದ ಪುಸ್ತಕಗಳ ಕಡೆಗೆ ಕಣ್ಣು ಹಾಯಿಸುತ್ತಿರುವಾಗ ಈ ಪುಸ್ತಕವೊಂದು ನನ್ನನ್ನು ಸೆಳೆಯಿತು. "ನಾಗರಸ ಕವಿಯ ಕರ್ಣಾಟಕ ಭಗವದ್ಗೀತೆ" ಎಂಬುದು ಅದರ ಶೀರ್ಷಿಕೆ.
'ಯಾರಪ್ಪ ಇವನು ನಾಗರಸ! ಎಲ್ಲಿಯೂ ಇವನ ಹೆಸರನ್ನು ಕೇಳಿದ ನೆನಪೇ ಬರುತ್ತಿಲ್ಲವಲ್ಲ!!' ಎಂದುಕೊಳ್ಳುತ್ತ ಆ ಪುಸ್ತಕವನ್ನೆತ್ತಿಕೊಂಡು ಒಂದೆರೆಡು ಪುಟಗಳನ್ನು ತಿರುವಿ ಹಾಕಿದೆ. ಅಚ್ಚರಿಯ ಜೊತೆಗೆ ಆನಂದವೂ ಆಯಿತು.!! ನಾನು ಹುಡುಕಿ ಬಂದ ಪುಸ್ತಕಗಳು ದೊರಕದೇ ಹೋದರೂ ಅಪೂರ್ವವೆನಿಸುವ ಪುಸ್ತಕವೊಂದು ಸಿಕ್ಕಿತಲ್ಲ ಎಂದು ಖುಷಿಯಾಯಿತು.
ಈ ಹೆಸರಿನ ಒಬ್ಬ ಕವಿ ಇದ್ದನೆಂದೂ, ಇಂತಹದ್ದೊಂದು ಕೃತಿ ಕನ್ನಡದಲ್ಲಿದೆಯೆಂದೂ ಅಲ್ಲಿಯವರೆಗೆ ನನಗೆ ತಿಳಿದೇ ಇರಲಿಲ್ಲ.. ಹೀಗೆ ಆಕಸ್ಮಿಕವಾಗಿ ತಿಳಿದದ್ದು ಒಳ್ಳೆಯದೇ ಆಯಿತು. ಪುಸ್ತಕವನ್ನು ನಾನು ಕೊಂಡ ನಂತರ ನನ್ನ ಹಲಕೆಲವು ಮಿತ್ರರಿಗೂ ಅದರ ಬಗ್ಗೆ ತಿಳಿಸಿದೆ - ಅದನ್ನು ಕೊಂಡು ಓದಲಿ ಎಂದು.. ಸಾಧ್ಯವಾದಲ್ಲಿ ನೀವೂ ಇದನ್ನು ಕೊಂಡು ಓದಿ :) ಇಂತಹ ಅಪರೂಪದ ಕೃತಿಯ ಬೆಲೆ ಕೇವಲ ೯೦ ರುಪಾಯಿಗಳಷ್ಟೇ.. ತುಂಬಾ ಹೆಚ್ಚೇನಲ್ಲ ಅಲ್ಲವೇ?
ಸರಿ, ಇಷ್ಟಕ್ಕೂ ಈ ನಾಗರಸ ಯಾರು? ಈ 'ಕರ್ಣಾಟಕ ಭಗವದ್ಗೀತೆ'ಯ ವಿಶಿಷ್ಟತೆಗಳೇನು? - ಇದನ್ನು ಕುರಿತು ಒಂದು ಪರಿಚಯ ಲೇಖನ..
ಕವಿಯನ್ನು ಕುರಿತು :
ಕವಿ ನಾಗರಸನು ೧೭ನೆಯ ಶತಮಾನದಲ್ಲಿ ಜೀವಿಸಿದ್ದವನು. ಕೃತಿಯಲ್ಲಿ ಈತ ತನ್ನ ಊರು ವಿಳಾಸದ ಬಗೆಗೆ ಹೆಚ್ಚಾಗಿ ಏನೂ ಹೇಳಿಕೊಂಡಿಲ್ಲ. ಆದರೆ, ಪ್ರಕೃತ ಕೃತಿಯಲ್ಲಿ ಕವಿಯೇ ಹೇಳಿಕೊಳ್ಳುವಂತೆ ಈತ "ಯೋಗಿ ಕಾಶ್ಯಪ ಗೋತ್ರ ಸಂಭವ.." ಈತನ ತಂದೆಯ ಹೆಸರು ವಿಶ್ವೇಶ್ವರ ಎಂದು. ಇವನು ತನ್ನ ಗುರುವಾದ ಶಂಕರ ಎಂಬುವವನ ಸೂಚನೆಯಂತೆ ಈ ಕೃತಿಯನ್ನು ರಚಿಸಿದ್ದಾನೆ ಎಂದು ಕೃತಿಯಿಂದಲೇ ತಿಳಿದುಬರುತ್ತದೆ. ನಾಗರಸ ಕವಿಯು ರಚಿಸಿದ ಏಕೈಕ ಕೃತಿ ಈ 'ಕರ್ಣಾಟಕ ಭಗವದ್ಗೀತೆ' ಎಂದು ವಿದ್ವಾಂಸರ ಅನಿಸಿಕೆ. ನಾಗರಸನು ಈ ಕೃತಿಯನ್ನು ಸುಮಾರು ೧೬೫೦ರ ವೇಳೆಗೆ ರಚಿಸಿರಬಹುದು ಎಂದು ಊಹಿಸಲಾಗಿದೆ.
ಕೃತಿಯನ್ನು ಕುರಿತು:
ಮಹಾಭಾರತ ಕಾವ್ಯದ ಪ್ರಮುಖ ಘಟ್ಟವಾದ ಗೀತೋಪದೇಶವನ್ನು(ಯುದ್ಧರಂಗದಲ್ಲಿ ಭಗವಾನ್ ಶ್ರೀ ಕೃಷ್ಣ ಹಾಗು ಅರ್ಜುನನ ನಡುವೆ ನಡೆದ ಸಂವಾದ) ಕವಿ ನಾಗರಸನು ಅತ್ಯಂತ ಸರಳವಾಗಿ ಕನ್ನಡಕ್ಕೆ ಅನುವಾದಿಸಿದ್ದಾನೆ. ಅದೂ ಹೇಗೆ, ಮೂಲ ಸಂಸ್ಕೃತದ ಪ್ರತಿಯೊಂದು ಶ್ಲೋಕವನ್ನು ಸ್ವಲ್ಪವೂ ಅರ್ಥ ಕೆಡದಂತೆ ಒಂದೊಂದು ಭಾಮಿನಿ ಷಟ್ಪದಿಯ ಪದ್ಯಗಳಲ್ಲಿ ಕನ್ನಡೀಕರಿಸಿದ್ದಾನೆ.
ಮೂಲ ಮಹಾಭಾರತದ ಭಾಗಗಳನ್ನು ಸಂಸ್ಕೃತದಿಂದ ಹೀಗೆ ಕನ್ನಡಕ್ಕಿಳಿಸಿದ ಕವಿಗಳಲ್ಲಿ ಈತನೇನೂ ಮೊದಲನೆಯವನಲ್ಲ.. ಈತನಿಗೂ ಹಿಂದೆಯೇ ಹಲವಾರು ಕವಿಗಳು ಹಾಗೆ ಮಾಡಿದ್ದಾರೆ. ಆದರೆ ಇದೊಂದು ಹೊಸ ಪ್ರಯತ್ನ, ಸಂಪೂರ್ಣವಾಗಿ ಸಂಸ್ಕೃತ ಭಗವದ್ಗೀತೆಯನ್ನು ಕನ್ನಡಕ್ಕೆ ಅನುವಾದಿಸಿದವನು ಇವನೊಬ್ಬನೇ..
ಎಲ್ಲಕ್ಕಿಂತ ನನ್ನನ್ನು ಹೆಚ್ಚಾಗಿ ಮೋಡಿ ಮಾಡಿದ್ದು ಆತನ ಭಾಷೆಯಲ್ಲಿನ ಸರಳತೆ, ಅಚ್ಚುಕಟ್ಟಾದ ನಿರೂಪಣೆ (ಹಳಗನ್ನಡದ ಪರಿಚಯವಿಲ್ಲದವರಿಗೂ ಕೂಡ ಸುಲಭವಾಗಿ ಅರ್ಥವಾಗಬಲ್ಲಂತಹ ಅತ್ಯಂತ ಸರಳ ಭಾಷೆಯಲ್ಲಿ ಈತ ಗೀತೆಯನ್ನು ಅನುವಾದಿಸಿದ್ದಾನೆ.)
ಒಂದು ಶ್ಲೋಕದಲ್ಲಿನ ಅರ್ಥ ಸಂಪತ್ತನ್ನೂ,ಶಬ್ದ ಸಂಪತ್ತನ್ನೂ ಸ್ವಲ್ಪವೂ ಕುಂದಾಗದಂತೆ ಒಂದೇ ಷಟ್ಪದಿಯಲ್ಲಿ(ಅಥವಾ ಬೇರಾವುದೇ ಪ್ರಕಾರದಲ್ಲಿ) ತುಂಬುವುದು ಸುಲಭದ ಮಾತೇನಲ್ಲ. ಅದು ಅತ್ಯಂತ ಕ್ಲಿಷ್ಟಕರ ಕಾರ್ಯವೇ ಹೌದು, ಆದರೆ ನಾಗರಸನು ಈ ಕಾರ್ಯದಲ್ಲಿ ಸಫಲನಾಗಿದ್ದಾನೆ. ಇದೊಂದು ಮಹತ್ಸಾಧನೆಯೇ ಅಲ್ಲವೇ?
ನಾಗರಸನ ಅನುವಾದ ಎಷ್ಟು ಸೊಗಸಾಗಿ, ಸುಲಭವಾಗಿದೆ ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ಇಲ್ಲಿ ಗಮನಿಸಬಹುದು :
------------------------------------------------------------------------------------------------------------------
ಶ್ಲೋಕ : ನ ಕಾಂಕ್ಷೇ ವಿಜಯಂ ಕೃಷ್ಣಾ ನ ಚ ರಾಜ್ಯಂ ಸುಖಾನಿ ಚ|
ಕಿಂ ನೋ ರಾಜ್ಯೇನ ಗೋವಿಂದಾ ಕಿಂ ಭೋಗೈರ್ಜೀವಿತೇ ನ ವಾ| - ೧.೩೨
ಅರ್ಥ : ಅರ್ಜುನ ಹೇಳುತ್ತಾನೆ "ಕೃಷ್ಣ, ನನಗೆ ಈ ಯುದ್ಧದಲ್ಲಿ ಗೆಲ್ಲುವುದೂ ಬೇಡ, ರಾಜ್ಯ-ಸುಖವೂ ಬೇಡ. ಗೋವಿಂದಾ, ಈ ರಾಜ್ಯ- ಭೋಗಗಳಿಂದ, ಇಂತಹ ಜೀವನದಿಂದ (ತನ್ನವರನ್ನೆಲ್ಲ ಕೊಂದ ನಂತರ ಪಡೆವ ವೈಭವದ ಜೀವನ) ನಮಗುಂಟಾಗುವ ಪ್ರಯೋಜನವಾದರೂ ಏನು?"
ಕರ್ಣಾಟಕ ಭಗವದ್ಗೀತೆಯಲ್ಲಿ :
ಘಾಸಿಯಾದೆನು ರಿಪುಗಳನು ಗೆಲು
ವಾಸೆ ತಾನೆನಗಿಲ್ಲ ರಾಜ್ಯವ
ನಾಸುಖಂಗಳ ಬಯಸುವವನಾನಲ್ಲ ಗೋವಿಂದ
ಕ್ಲೇಶದಿಂದಪಕೀರ್ತಿಯಿಂಬಹ
ದೇಶದಿಂ ಭೋಗಂಗಳಿಂ ನಾ
ವೇಸುದಿನ ಜೀವಿಸಲುಮಾವುದು ಫಲವು ಕೇಳೆಂದ.
------------------------------------------------------------------------------------------------------------------
ಶ್ಲೋಕ : ಗುರೂನ್ ಅಹತ್ವಾ ಹಿ ಮಹಾನುಭಾವಾನ್ ಶ್ರೇಯಃ ಭೋಕ್ತುಂ ಭೈಕ್ಷ್ಯಂ ಅಪಿ ಇಹ ಲೋಕೇ
ಹತ್ವಾ ಅರ್ಥ ಕಾಮಾನ್ ತು ಗುರೂನ್ ಇಹೈವ ಭುಂಜೀಯ ಭೋಗಾನ್ ರುಧಿರ ಪ್ರದಿಗ್ಧಾನ್ || - ೨.೫
ಅರ್ಥ : "ಕೃಷ, ಮಹಾನುಭಾವರಾದ ಈ ಗುರುಜನರನ್ನು ಕೊಲ್ಲುವುದಕ್ಕಿಂತ ಭಿಕ್ಷೆ ಬೇಡಿ ಜೀವಿಸುವುದೇ ಒಳ್ಳೆಯದಲ್ಲವೇ?
ಅದರ ಬದಲು ಅರ್ಥದಾಸೆಗೆ ಬಿದ್ದು ನಾನು ಇವರನ್ನು ಕೊಂದೆನಾದರೆ ಮುಂದೆ ನಾವು ಅನುಭವಿಸಬಹುದಾದ ಎಲ್ಲ ಭೋಗಗಳು ಇವರ ರಕ್ತದಿಂದ ತೊಯ್ದಿರುವುದಿಲ್ಲವೇ"
ಹಿರಿಯರನು ಗುರುಗಳನು ಕೊಲ್ಲದೆ
ತಿರಿದುಣುವುದೇ ಲೇಸು ಜಗದಲಿ
ಗುರುಗಳನು ನೆರೆಕೊಂದವರ ರಕ್ತಂಗಳಿಂ ನೆನೆದ
ಪರಕೆ ಸಲದ ಅನರ್ಥ ಕಾಮದ
ಪಿರಿದು ಭೋಗಂಗಳನು ಭೋಗಿಸಿ
ನರಕದಲಿ ಬೀಳುವೆನದೆಂತೈ ದೇವ ಹೇಳೆಂದ
-------------------------------------------------------------------------------------------------------------------
ಶ್ಲೋಕ : ದೇಹಿನೋಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ |
ತಥಾ ದೇಹಾಂತರ ಪ್ರಾಪ್ತಿರ್ಧೀರಸ್ತತ್ರ ನ ಮುಹ್ಯತಿ | - ೨.೧೩
ಅರ್ಥ : "ಅರ್ಜುನ, ಹೇಗೆ ದೇಹಿಯಾದ ಜೀವಾತ್ಮನಿಗೆ ಈ ದೇಹದಲ್ಲಿ ಬಾಲ್ಯ-ಯೌವನ ಮತ್ತು ವೃದ್ಧಾಪ್ಯಗಳು ಉಂಟಾಗುತ್ತವೆಯೋ ಹಾಗೆಯೇ ಈ ದೇಹ ತೀರಿದ ಬಳಿಕ ಬೇರೆ ಶರೀರವು ದೊರೆಯುತ್ತದೆ. ಆ ವಿಷಯವಾಗಿ ಧೀರರು ಮೋಹಿತರಾಗುವುದಿಲ್ಲ."
ತನುವನಭಿಮಾನಿಸಿದವಂಗೀ
ತನುವಿನಲಿ ಕೌಮಾರ ಯೌವನ
ದಿನದ ನಂತರ ಜರೆಗಳೆಂಬಿವನನುಭವಿಸುತೆ
ತನುವಿದನು ಬಿಟ್ಟನ್ಯ ದೇಹವ
ನನುಕರಿಸಿ ತಾನಿರ್ದಡದರಲಿ
ವಿನುತಧೀರನು ಮುಂದುಗೆಡನೆಲೆ ಪಾರ್ಥ ಕೇಳೆಂದ
-------------------------------------------------------------------------------------------------------------------
ಶ್ಲೋಕ : ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋsಪರಾಣಿ |
ತಥಾ ಶರೀರಾಣಿ ವಿಹಾಯ ಜೀರ್ಣಾನ್ಯ ನ್ಯಾನಿ ಸಂಯಾತಿ ನವಾನಿ ದೇಹೀ | - ೨.೨೨
ಅರ್ಥ : ಮನುಷ್ಯನು ತನ್ನ ಹಳೆಯ ವಸ್ತ್ರವನ್ನು ಬಿಸುಟು ಬೇರೆ ಹೊಸ ವಸ್ತ್ರವನ್ನು ಧರಿಸುವಂತೆಯೇ, ಜೀವಾತ್ಮನು ಹಳೆಯ ಶರೀರವನ್ನು ಬಿಸುಟು ಬೇರೆ ಹೊಸ ಶರೀರವನ್ನು ಪಡೆಯುತ್ತಾನೆ.
ಹಳೆಯ ವಸ್ತ್ರಂಗಳನುಳಿದು ಹೊಸ
ಕೆಲವು ವಸ್ತ್ರಂಗಳನು ಹೊದೆವಂ
ತಿಳೆಯ ಭೋಗದದೃಷ್ಟ ತೀರಲು ಜೀವನೀತನುವ
ಕಳಚಿ ಹೊಸತಾದನ್ಯವಹ ತನು
ಗಳನು ತಾನೈದುತ್ತಿಹನು ನಿಜ
ತಿಳಿಯೆ ದೇಹಭ್ರಮಣೆ ಕೆಡುವುದು ಪಾರ್ಥ ಕೇಳೆಂದ.
-------------------------------------------------------------------------------------------------------------------
ಶ್ಲೋಕ : ಅಥ ಚೈನಂ ನಿತ್ಯಜಾತಂ ನಿತ್ಯಂ ವಾ ಮನ್ಯಸೇ ಮೃತಂ|
ತಥಾಪಿ ತ್ವಂ ಮಹಾಬಾಹೋ ನೈವಂ ಶೋಚಿತುಮರ್ಹಸಿ| - ೨.೨೬
ಅರ್ಥ : "ಆದರೂ, ಒಂದು ವೇಳೆ ನೀನು ಈ ಆತ್ಮನು ಸದಾ ಹುಟ್ಟುವವನು ಹಾಗೂ ಸದಾ ಸಾಯುವವನು ಎಂದು ತಿಳಿದರೂ ಕೂಡ, ಹೇ ಮಹಾಬಾಹುವೇ! ನೀನು ಈ ಪ್ರಕಾರವಾಗಿ ಶೋಕಿಸುವುದಕ್ಕೆ ಅರ್ಹನಲ್ಲ"
ಮತ್ತಿದನು ಫಲುಗುಣನೆ ಕೇಳೈ
ನಿತ್ಯ ಜನ್ಮವ ಪಡೆವಾತ್ಮನು
ನಿತ್ಯ ಸಾವುಳ್ಳವನು ತಾನಹನೆಂದು ಮತಿಗೆಟ್ಟು
ಚಿತ್ತದಲಿ ನೀ ಬಗೆದೆಯಾದಡೆ
ಸತ್ತು ಹುಟ್ಟುವ ಗುಣವ ಕೊಡುವ
ಚಿತ್ತೆನಿಸಿದಾತ್ಮನ ಕುರಿತು ಶೋಕಿಸಲು ಬೇಡೆಂದ.
-------------------------------------------------------------------------------------------------------------------
ಶ್ಲೋಕ : ಜಾತಸ್ಯ ಹಿ ಧ್ರುವೋ ಮೃತ್ಯುಃ ಧ್ರುವಂ ಜನ್ಮ ಮೃತಸ್ಯ ಚ |
ತಸ್ಮಾದಪರಿಹಾರ್ಯೇsರ್ಥೇ ನ ತ್ವಂ ಶೋಚಿತುಮರ್ಹಸಿ|| - ೨.೨೭
ಅರ್ಥ : ಏಕೆಂದರೆ, ಈ ಅಭಿಪ್ರಾಯಕ್ಕನುಸಾರವಾಗಿ 'ಹುಟ್ಟಿದವನಿಗೆ ಸಾವು ನಿಶ್ಚಿತವಾಗಿದೆ, ಮತ್ತು ಸತ್ತವನು ಹುಟ್ಟುವುದೂ ನಿಶ್ಚಿತವಾಗಿದೆ.' ಆದ್ದರಿಂದ ಈ ಉಪಾಯವಿಲ್ಲದ ವಿಷಯವಾಗಿ ನೀನು ಶೋಕಿಸುವುದು ಯೋಗ್ಯವಲ್ಲ.
ಉದ್ಭವಿಸಿದಾತ್ಮಂಗೆ ಸಾವೇ
ವಿದಿತ ಸತ್ತಾತ್ಮಂಗೆ ಪುನರಪಿ
ಯುದುಭವಿಸುವುದು ನೆಲೆ ಕಣಾ ಕೇಳದು ನಿಮಿತ್ತದಲಿ
ಇದಕೆ ಪರಿಹಾರಾರ್ಥವಿಲ್ಲದ
ಹದನ ನೀನೇ ತಿಳಿದು ಕಡುಶೋ
ಕದಲಿ ಮರುಗುವುದುಚಿತವಲ್ಲೆಲೆ ಪಾರ್ಥ ಕೇಳೆಂದ.
-------------------------------------------------------------------------------------------------------------------
ಶ್ಲೋಕ : ಧೂಮೇನಾವ್ರಿಯತೇ ವಹ್ನಿಃ ಯಥಾದರ್ಶೋ ಮಲೇನ ಚ |
ಯಥೋಲ್ಬೇನಾವೃತೋ ಗರ್ಭಃ ತಥಾ ತೇನೇದಮಾವೃತಮ್|| - ೩.೩೮
ಅರ್ಥ : ಹೇಗೆ ಹೊಗೆಯಿಂದ ಬೆಂಕಿಯು, ಕೊಳೆಯಿಂದ ಕನ್ನಡಿಯು , ಜರಾಯು(ಗರ್ಭಕೋಶದ) ಪೊರೆಯಿಂದ ಗರ್ಭ(ಶಿಶು)ವು ಮುಚ್ಚಲ್ಪಟ್ಟಿರುತ್ತದೆಯೋ ಹಾಗೆ ಈ ಕಾಮವೆಂಬ ಪೊರೆಯಿಂದ ಈ ಜ್ಞಾನವು ಮುಚ್ಚಲ್ಪಟ್ಟಿದೆ.
ಹೊಗೆಯ ಬಲುಹಿಂದಗ್ನಿ ಕಿಲುಬುರೆ
ನೆಗೆದಿರಲು ದರ್ಪಣವು ಮಾಸಿಂ
ದೊಗೆದ ಗರ್ಭವು ಮುಸುಕಿಕೊಂಡಿರ್ಪಂತೆ ಹೃದಯದಲಿ
ನಿಗಮತತ್ವಜ್ಞಾನ ಕಾಮಾ
ದಿಗಳೆನಿಪ ಹಗೆಯಿಂದ ತಿಳಿದರ
ಬಗೆಗೆ ಮುಸುಕಿಕೊಂಡಿಹುದು ಕೇಳೆಂದನಸುರಾರಿ.
------------------------------------------------------------------------------------------------------------------
ತೀರ ಸರಳವಾದ ನಡುಗನ್ನಡ ಭಾಷೆಯಲ್ಲಿರುವ ಈ ಕೃತಿಯನ್ನು ಓದಿ ಜೀರ್ಣಿಸಿಕೊಳ್ಳುವುದು ಅಂತಹ ಕಷ್ಟವೇನಲ್ಲ. ಒಂದು ಸಾಧಾರಣ ಕನ್ನಡ ಶಬ್ದಕೋಶ ಜೊತೆಗಿದ್ದರಂತೂ ಇದನ್ನು ಓದಿ ಅರ್ಥ ಮಾಡಿಕೊಳ್ಳುವುದು ಇನ್ನೂ ಸುಲಭವೆನಿಸದೇ ಇರದು. ಯಾವುದಕ್ಕೂ ಒಮ್ಮೆ ಪ್ರಯತ್ನಿಸಿ ನೋಡಿ :) ಕನ್ನಡಕ್ಕೆ ಹೆಮ್ಮೆಯೆನಿಸುವಂತಹ ಇಂತಹ ಕೃತಿಗಳನ್ನು ಓದಿ, ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆಯಲ್ಲವೇ?