
ದುಬಾರಿ ಶಾಂಪೂ ಮತ್ತು ಇತರ ಕೂದಲ ಉತ್ಪನ್ನಗಳು ನಿಮ್ಮ ಹಣವನ್ನು ಪೋಲು ಮಾಡುತ್ತಿದ್ದರೆ ಇಲ್ಲಿದೆ ಕೆಲವು ಸಲಹೆಗಳು. ಆರೋಗ್ಯಕರವಾದ ಕೂದಲನ್ನು ಪಡೆಯಲು ಬೇಕಾದ ಅಗ್ಗದ ರಹಸ್ಯ ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ. ನಿಮಗೆ ಇದನ್ನು ನಂಬಲು ಅಸಾಧ್ಯ ಎಂದೆನಿಸಿದರೂ ಇದು ನಿಜ. ಆದು ಬೇರೇನಲ್ಲಾ ನಿಮ್ಮ ಆಹಾರದ ರುಚಿಯನ್ನು ಹೆಚ್ಚಿಸುವ ಉಪ್ಪು. ನಿಮ್ಮ ಕೂದಲಿನ ಆರೋಗ್ಯ ಹೆಚ್ಚಿಸಲು ಉಪ್ಪು ಸಹಾಯಕ ಎಂಬುದು ನಿಜ.
ತಲೆಹೊಟ್ಟಿಗೆ ಇರುವ ಮುಖ್ಯವಾದ ಕಾರಣ ಎಂದರೆ ಕೂದಲಿನ ಬುಡದಲ್ಲಿರುವ ಡೆಡ್ ಸ್ಕಿನ್ ಒಣಗಿ ಫ್ಲೆಕ್ಸ್ ಆಗಿ ಉದುರುವುದು. ತಲೆಯಲ್ಲಿ ಆರ್ದ್ರತೆ ಮತ್ತು ಶಿಲೀಂಧ್ರ ಕೂಡ ತಲೆಹೊಟ್ಟು ಹೆಚ್ಚುವಂತೆ ಮಾಡುತ್ತದೆ.ಅಡುಗೆಗೆ ಬಳಸುವ ಉಪ್ಪು ಕೂದಲಿನಲ್ಲಿ ಹೆಚ್ಚಾದ ಎಣ್ಣೆ ಅಂಶ ಮತ್ತು ಆರ್ಧ್ರತೆಯನ್ನು ತಡೆಯುವುದರ ಜೊತೆಗೆ ತಲೆಹೊಟ್ಟನ್ನು ಕೂಡ ನಿವಾರಿಸುತ್ತದೆ. ಉಪ್ಪು ನೀರನ್ನು ನಿಮ್ಮ ಕೂದಲಿಗೆ ಸಿಂಪಡಿಸಿ ನಿಧಾನವಾಗಿ ಮಸಾಜ್ ಮಾಡಿ. ಸ್ವಲ್ಪ ಸಮಯದ ನಂತರ ಕೂದಲನ್ನು ಯಾವಾಗಲೂ ವಾಶ್ ಮಾಡುವಂತೆ ತಲೆಗೆ ಸ್ನಾನ ಮಾಡಿ ಮತ್ತು ಇದರ ಅನುಕೂಲವನ್ನು ನೋಡಿ.
ಕೂದಲು ಉದುರುವಿಕೆ ಸಾಮನ್ಯವಾಗಿ ಎಲ್ಲರಲ್ಲಿ ಕಂಡು ಬರುವ ಸಮಸ್ಯೆ. ರಾಸಾಯನಿಕ ಉತ್ಪನ್ನಗಳನ್ನು ಒಳಗೊಂಡಿರುವ ಶಾಂಪೂ ಬಳಸುವುದರಿಂದ ಕೂದಲು ಹೊಳಪನ್ನು ಕಳೆದುಕೊಳ್ಳುತ್ತದೆ. ಶಾಂಪೂವಿನ ಜೊತೆಗೆ ಸ್ವಲ್ಪ ಉಪ್ಪನ್ನು ಬಳಸುವುದರಿಂದ ಇದು ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ.
ಇದು ಕೂದಲು ದಪ್ಪವಾಗಿ ಕಾಣುವುದು ಮಾತ್ರವಲ್ಲ,ದಟ್ಟವಾಗಿ ಬೆಳೆಯಲು ಕೂಡ ಸಹಕರಿಸುತ್ತದೆ. ನಿಮಗೆ ಬೇಕಾದಷ್ಟು ಶಾಂಪೂವನ್ನು ತೆಗೆದುಕೊಂಡು ಅದರ ಅರ್ಧದಷ್ಟು ಉಪ್ಪನ್ನು ಬೆರೆಸಿ. ನಿಧಾನವಾಗಿ ಮಸಾಜ್ ಮಾಡಿ ಅದನ್ನು ಸ್ವಲ್ಪ ಹೊತ್ತು ಹಾಗೇ ಬಿಟ್ಟುಬಿಡಿ. ನಂತರ ತಣ್ಣೀರಿನಲ್ಲಿ ಕೂದಲನ್ನು ತೊಳೆಯಿರಿ.
ಕೂದಲು ಜಿಡ್ಡುಗಟ್ಟುವುದನ್ನು ತಡೆಯಲು ಪ್ರತಿ ಎರಡು ದಿನಕ್ಕೊಮ್ಮೆ ತಲೆಗೆ ಸ್ನಾನ ಮಾಡಬೇಕಾಗಿ ಬರುತ್ತಿದೆಯೇ? ಹಾಗಿದ್ದರೆ ಉಪ್ಪು ನಿಮ್ಮ ಸಹಾಯಕ್ಕೆ ಬರಬಹುದು. ಆರೋಗ್ಯಕರ ಕೂದಲನ್ನು ಪಡೆಯಲು ಎಣ್ಣೆ ಬಳಸುವುದು ಅಗತ್ಯ ಆದರೆ ವಿಪರೀತ ಎಣ್ಣೆಯಂಶ ಕೂಡ ಮುಜುಗರ ಉಂಟು ಮಾಡುತ್ತದೆ. ತಲೆ ಬುಡದಲ್ಲಿ ಸೆಬಾಸಿಯಸ್ ಗ್ರಂಥಿಯಲ್ಲಿ ಉತ್ಪತ್ತಿಯಾಗುವ ಎಣ್ಣೆ ಅಂಶವನ್ನು ಉಪ್ಪು ತಡೆಯುತ್ತದೆ. ಇದರಿಂದ ನಿಮ್ಮ ಕೂದಲಿನ ಗುಣಮಟ್ಟ ಸುಧಾರಿಸುತ್ತದೆ.
ಸೀ ಸಾಲ್ಟ್ ರಕ್ತ ಸಂಚಾರವನ್ನು ಸರಾಗಗೊಳಿಸಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವ ಒಂದು ರೀತಿಯ ಉಪ್ಪು. ಇದರಲ್ಲಿರುವ ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ, ಬ್ರೋಮೈಡ್, ಸಲ್ಫಾರ್, ಜಿಂಕ್, ಕ್ಲೋರೈಡ್ ಇವುಗಳು ಕೂದಲಿನ ಬೆಳವಣಿಗೆ ಹೆಚ್ಚಿಸಿ ಬಲಯುತವಾಗಿಸುತ್ತದೆ. ಈ ಎಲ್ಲಾ ರೀತಿಯಲ್ಲಿ ಉಪ್ಪನ್ನು ಬಳಸುವುದರಿಂದ ಕೂದಲು ಬೆಳೆಯಲು ಅನುಕೂಲವಾಗುತ್ತದೆ. ಅಡುಗೆ ಮನೆಯಲ್ಲಿ ದೊರೆಯುವ ಈ ಉಪ್ಪನ್ನು ಬಳಸಿ ಮತ್ತು ಇದರಿಂದಾಗುವ ಮ್ಯಾಜಿಕ್ ನೋಡಿ.