Hair Fall Control: ಥಟ್ಟಂತ ಕೂದಲು ಉದುರುವುದು ನಿಲ್ಲಬೇಕು ಅಂದ್ರೆ ಈ 5 ಸಿಂಪಲ್ ಸಲಹೆ ಪಾಲಿಸಿ
ಕೂದಲು ಉದುರುವುದು ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಸಮಸ್ಯೆ. ಇದು ಹೆಣ್ಣುಮಕ್ಕಳನ್ನು ಮಾತ್ರವಲ್ಲ, ಗಂಡುಮಕ್ಕಳನ್ನು ಕಾಡುತ್ತಿದೆ. ಹಾಗಾದ್ರೆ ಕೂದಲು ಉದುರುವ ಸಮಸ್ಯೆ ಥಟ್ಟಂತ ನಿಲ್ಲಬೇಕು ಅಂದ್ರೆ ಏನು ಮಾಡಬಹುದು? ಇಲ್ಲಿದೆ ಪರಿಹಾರ

ಋತುಮಾನಗಳು ಬದಲಾದಂತೆ ಚರ್ಮ ಹಾಗೂ ಕೂದಲಿನ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಅದರಲ್ಲೂ ಚಳಿಗಾಲ ಬಂತೆಂದರೆ ಕೂದಲು ಉದುರುವ ಸಮಸ್ಯೆ ಹೆಚ್ಚು ಕಾಡುತ್ತದೆ. ಇತ್ತೀಚೆಗಂತೂ ನೀರು, ಕಲುಷಿತ ವಾತಾವರಣ, ಆಹಾರಗಳ ಕಾರಣದಿಂದ ಎಲ್ಲಾ ವಯೋಮಾನದವರಲ್ಲೂ ಕೂದಲು ಉದುರುವ ಸಮಸ್ಯೆ ಸಾಮಾನ್ಯವಾಗಿದೆ. ಪ್ರತಿದಿನ ಅಲ್ಪಸ್ವಲ್ಪ ಕೂದಲು ಉದುರಿದರೆ ತೊಂದರೆಯಿಲ್ಲ, ಆದರೆ ಪ್ರತಿದಿನ ರಾಶಿ ರಾಶಿ ಕೂದಲು ಉದುರುತಿದ್ರೆ ಯಾರಿಗೆ ಬೇಸರ ಆಗೊಲ್ಲ ಹೇಳಿ. ಆದರೆ ಖಂಡಿತ ಈ ಸಮಸ್ಯೆಗೆ ಪರಿಹಾರವಿದೆ. ಅಲ್ಲದೆ ಈ ಪರಿಹಾರವು ಆದಷ್ಟು ಬೇಗ ನಿಮ್ಮಲ್ಲಿ ಕೂದಲು ಉದುರುವ ಸಮಸ್ಯೆ ಸರಿ ಹೋಗುವಂತೆ ಮಾಡುತ್ತದೆ. ಹಾಗಾದ್ರೆ ಅದೇನು ಅಂತಹ ಪರಿಹಾರ ಅಂತ ಯೋಚನೆ ಮಾಡ್ತಾ ಇದೀರಾ? ಮುಂದೆ ಓದಿ
ಸಮತೋಲಿತ ಡಯೆಟ್
ಕೂದಲು ಉದುರುವುದು ಥಟ್ ಅಂತ ನಿಲ್ಲಬೇಕು ಅಂದ್ರೆ ನೀವು ಮೊದಲು ಮಾಡಬೇಕಿರುವುದು ಸಮತೋಲಿತ ಆಹಾರ ಸೇವಿಸುವುದು. ಪೋಷಕಾಂಶ ಸಮೃದ್ಧ ಆಹಾರ ಸೇವನೆಯಿಂದ ಕೂದಲು ಉದುರುವ ಸಮಸ್ಯೆಯನ್ನು ತಡೆಗಟ್ಟಬಹುದು. ಕಬ್ಬಿಣಾಂಶ, ವಿಟಮಿನ್ ಎ ಮತ್ತು ಡಿ, ಸತುವಿನ ಅಂಶದ ಕೊರತೆಯಿಂದ ಕೂದಲು ಉದುರುವ ಸಮಸ್ಯೆ ಹೆಚ್ಚುತ್ತದೆ. ವಿವಿಧ ಬಗೆಯ ಹಣ್ಣು, ತರಕಾರಿ, ಲೀನ್ ಪ್ರೊಟೀನ್, ಧಾನ್ಯಗಳನ್ನು ಹೆಚ್ಚು ಹೆಚ್ಚು ಸೇವಿಸಿ. ಇದರೊಂದಿಗೆ ಪಾಲಕ್, ಮೊಟ್ಟೆ, ಒಣಹಣ್ಣುಗಳು, ಮೀನು ಇವುಗಳ ಸೇವನೆಯು ಬಹಳ ಅವಶ್ಯ. ಇವುಗಳಿಂದ ಕೂದಲಿನ ಆರೋಗ್ಯ ಸುಧಾರಿಸುತ್ತದೆ.
ಎಸೆನ್ಷಿಯಲ್ ಆಯಿಲ್ ಮಸಾಜ್
ಸಾರಭೂತ ತೈಲವನ್ನು ಹಚ್ಚಿ ಕೂದಲ ಬುಡಕ್ಕೆ ಚೆನ್ನಾಗಿ ಮಸಾಜ್ ಮಾಡುವುದರಿಂದ ಕೂದಲಿನ ಫಾಲಿಕಲ್‌ಗಳಲ್ಲಿ ರಕ್ತ ಸಂಚಾರ ಸುಗಮವಾಗುತ್ತದೆ. ಇದು ಕೂದಲವನ್ನು ಪೋಷಿಸಿ, ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ತೆಂಗಿನೆಣ್ಣೆ, ಬಾದಾಮಿ ಎಣ್ಣೆ, ಆಲಿವ್ ಎಣ್ಣೆ ಇವುಗಳಲ್ಲಿ ಯಾವುದಾದರೂ ಒಂದು ಎಣ್ಣೆ ತೆಗೆದುಕೊಂಡು ಅದಕ್ಕೆ ಕೆಲವು ಹನಿ ಲ್ಯಾವೆಂಡರ್ ಎಣ್ಣೆ, ರೋಸ್ಮರಿ ಅಥವಾ ಪೆಪ್ಪರ್‌ಮಿಂಟ್ ಆಯಿಲ್ ಸೇರಿಸಿ. ಇದನ್ನು ಬಿಸಿ ಮಾಡಿ, ಉಗುರು ಬೆಚ್ಚಗಿನ ಎಣ್ಣೆಯನ್ನು ನೆತ್ತಿಯ ಬುಡಕ್ಕೆ ಮಸಾಜ್ ಮಾಡಿ. ನಂತರ 30 ಗಂಟೆ ಬಿಟ್ಟು ತಲೆಸ್ನಾನ ಮಾಡಿ.
ರಾಸಾಯನಿಕಗಳ ಬಳಕೆ ತಕ್ಷಣಕ್ಕೆ ನಿಲ್ಲಿಸಿ
ರಾಸಾಯನಿಕ ಅಂಶಗಳಿರುವ ಯಾವುದೇ ಶಾಂಪೂ, ಕಂಡೀಷನರ್ ಅಥವಾ ಕೂದಲಿನ ಉತ್ಪನ್ನಗಳ ಅತಿಯಾದ ಬಳಕೆಯು ಕೂದಲು ಉದುರುವಿಕೆಯನ್ನು ಹೆಚ್ಚಿಸಬಹುದು. ಸೌಮ್ಯತರದ ಸಲ್ಫೇಟ್ ಮುಕ್ತ ಉತ್ಪನ್ನಗಳನ್ನು ಬಳಸುವುದು ಸೂಕ್ತ. ಇದರೊಂದಿಗೆ ಸ್ಟ್ರೇಟ್‌ನಿಂಗ್, ಕರ್ಲಿಂಗ್ ಐರನ್‌ನಂತಹ ಎಲೆಕ್ಟ್ರಾನಿಕ್ ಉತ್ಪನ್ನಗಳ ಬಿಸಿಯು ಕೂದಲ ಹಾನಿಯನ್ನು ಇನ್ನಷ್ಟು ಹೆಚ್ಚು ಮಾಡಬಹುದು. ಅತಿಯಾದ ಶಾಖದಿಂದ ಕೂದಲು ಬುಡದಿಂದಲೇ ದುರ್ಬಲವಾಗಬಹುದು ಎಚ್ಚರ.
ಲೋಳೆಸರದ ತಿರುಳು
ಅಲೊವೆರಾ ಜೆಲ್ ಕೂದಲು ಚರ್ಮದ ಉರಿಯೂತವನ್ನು ನಿವಾರಿಸುವ ಗುಣವನ್ನು ಹೊಂದಿದೆ. ಇದು ಕೂದಲು ಉದುರುವುದನ್ನು ತಡೆಯಲು ಬೆಸ್ಟ್. ತಾಜಾ ಲೋಳೆಸರ ತಿರುಳನ್ನು ಕೂದಲಿನ ಬುಡಕ್ಕೆ ಹಚ್ಚಿ, ಇದನ್ನು 45 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ಉಗುರು ಬೆಚ್ಚಿನ ನೀರಿನಿಂದ ಸೌಮ್ಯತರ ಶಾಂಪೂ ಬಳಸಿ ತಲೆಸ್ನಾನ ಮಾಡಿ. ಅಲೊವೆರಾ ಕೂದಲಿನ ಬುಡದಲ್ಲಿ ಪಿಎಚ್ ಲೆವೆಲ್ ನಿಯಂತ್ರಣದಲ್ಲಿ ಇರಲು ಸಹಾಯ ,ಆಡುತ್ತದೆ. ಆ ಮೂಲಕ ಉರಿಯೂತವನ್ನು ನಿವಾರಿಸಿ, ಕೂದಲು ಉದುರುವುದನ್ನು ತಡೆಯುತ್ತದೆ.
ಸರಿಯಾದ ಕ್ರಮದಲ್ಲಿ ಕೂದಲ ನಿರ್ವಹಣೆ
ಕೂದಲು ಉದುರುವುದನ್ನು ನಿಲ್ಲಿಸಲು ಸರಿಯಾದ ಕ್ರಮದಲ್ಲಿ ಕೂದಲ ನಿರ್ವಹಣೆ ಮಾಡುವುದು ಬಹಳ ಮುಖ್ಯವಾಗುತ್ತದೆ. ನಿಮ್ಮ ಕೂದಲಿಗೆ ಹೊಂದುವ ಶಾಂಪೂವಿನಿಂದ ನಿರಂತರ ತಲೆಸ್ನಾನ, ಕೂದಲ ತೇವಾಂಶ ಕಾಪಾಡಿಕೊಳ್ಳಲು ಕಂಡಿಷನರ್ ಬಳಸುವುದು, ಒದ್ದೆ ಕೂದಲು ಬಾಚುವಾಗ ಅಗಲ ಹಲ್ಲಿನ ಬಾಚಣಿಗೆ ಬಳಸುವುದು ಈ ಎಲ್ಲವೂ ಮುಖ್ಯವಾಗುತ್ತದೆ. ಕೂದಲನ್ನು ಗಾಳಿಗೆ ಹರಡಿ ಆರಿಸುವುದು ಉತ್ತಮ ವಿಧಾನ. ಕೂದಲನ್ನು ಸೌಮ್ಯತರದ ರಬ್ಬರ್ ಬೆಂಡ್‌ಗಳಿಂದ ಜುಟ್ಟು ಹಾಕಿ. ಟೈಟ್ ಆಗಿ ಕೂದಲಿಗೆ ಜುಟ್ಟು ಹಾಕುವುದು ಅಪಾಯ.
ಆದರೆ ಒಂದು ವಿಚಾರ ನೆನಪಿರಲಿ ಕೂದಲು ಉದುರುವುದನ್ನು ನಿಲ್ಲಿಸಲು ಒಂದೆರಡು ದಿನಗಳಲ್ಲಿ ಖಂಡಿತ ಸಾಧ್ಯವಿಲ್ಲ. ಆದರೆ ಮೇಲೆ ತಿಳಿಸಿದ ಮಾರ್ಗಗಳನ್ನು ಚಾಚೂ ತಪ್ಪದೇ ಪಾಲಿಸುವುದರಿಂದ ಖಂಡಿತ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಈ ಸಲಹೆಗಳನ್ನು ಪಾಲಿಸಿದ ಮೇಲೂ ನಿರಂತರವಾಗಿ ಕೂದಲು ಉದುರುತ್ತಿದ್ದರೆ ಅದಕ್ಕೆ ಬೇರೆ ಆರೋಗ್ಯ ಸಮಸ್ಯೆಗಳೂ ಕಾರಣವಿರಬಹುದು. ಹಾಗಾಗಿ ತಜ್ಞ ವೈದ್ಯರನ್ನು ಕಾಣುವುದು ಉತ್ತಮ.