Republic Day: 75ನೇ ಗಣರಾಜ್ಯೋತ್ಸವ ಸಂಭ್ರಮ; ಭಾರತದ ಸಂವಿಧಾನದ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ವಿಚಾರಗಳಿವು
Republic Day 2024: ಇದೇ ಜನವರಿ 26 ರಂದು ಭಾರತವು 75ನೇ ವರ್ಷದ ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಿದೆ. ಭಾರತದ ಸಂವಿಧಾನದ ಬಗ್ಗೆ ಅದರ ಮಹತ್ವದ ಬಗ್ಗೆ ನಿಮಗೆ ತಿಳಿದಿದೆ. ಆದರೆ ಸಂವಿಧಾನ ರಚನೆಯ ಸಂಬಂಧ ನಿಮಗೆ ತಿಳಿದಿರದ ಕೆಲವು ಕುತೂಹಲಕಾರಿ ಅಂಶಗಳು ಇಲ್ಲಿವೆ.
ಈ ಬಾರಿ ಭಾರತವು 75ನೇ ವರ್ಷದ ಗಣರಾಜ್ಯೋತ್ಸವದ ಸಂಭ್ರಮದಲ್ಲಿದೆ. ಪ್ರತಿ ವರ್ಷದಂತೆ ಈ ವರ್ಷವು ಭಾರತವು ಗಣರಾಜ್ಯೋತ್ಸವ ದಿನದಂದು ವಿಶೇಷ ಅತಿಥಿಯನ್ನು ಭಾರತಕ್ಕೆ ಕರೆಸುತ್ತಿದೆ. ಈ ಬಾರಿ ಭಾರತದ ಗಣತಂತ್ರ ದಿನಕ್ಕೆ ವಿಶೇಷ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವಲ್ ಮ್ಯಾಕ್ರನ್ ಆಗಮಿಸುತ್ತಿದ್ದಾರೆ. ಅಲ್ಲದೇ ಭಾರತದಲ್ಲಿ ಗಣರಾಜ್ಯೋತ್ಸವ ದಿನದಂದು ಫ್ರಾನ್ಸ್ನಿಂದ ಆಗಮಿಸುತ್ತಿರುವ ಆರನೇ ಅಧ್ಯಕ್ಷ ಎಂಬ ಕೀರ್ತಿಗೆ ಇಮ್ಯಾನುವಲ್ ಮ್ಯಾಕ್ರನ್ ಪಾತ್ರರಾಗಿದ್ದಾರೆ. ಭಾರತದ 75ನೇ ಗಣರಾಜ್ಯೋತ್ಸವ ದಿನಕ್ಕೆ ವಿಶೇಷ ಅತಿಥಿಯಾಗಿ ಅಮೆರಿಕ ಅಧ್ಯಕ್ಷ ಜೊ ಬಿಡೈನ್ಗೆ ಆಹ್ವಾನ ನೀಡಲಾಗಿತ್ತು. ಆದರೆ ಜೊ ಬಿಡೈನ್ರಿಗೆ ಈ ಸಮಯದಲ್ಲಿ ಭಾರತದ ಪ್ರವಾಸ ಸಾಧ್ಯವಿಲ್ಲದ ಕಾರಣ ಫ್ರಾನ್ಸ್ ಅಧ್ಯಕ್ಷರಿಗೆ ಆಹ್ವಾನ ನೀಡಲಾಗಿದೆ .
ಗಣರಾಜ್ಯೋತ್ಸದ ಇತಿಹಾಸ ಮತ್ತು ಮಹತ್ವ:
ಗಣರಾಜ್ಯೋತ್ಸವವು ಜನವರಿ 26, 1950 ರಂದು ಭಾರತದ ಸಂವಿಧಾನದ ಅಂಗೀಕಾರವನ್ನು ನೆನಪಿಸುತ್ತದೆ. ಭಾರತವು 1947 ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆದ ನಂತರ ಅಂದರೆ ಜನವರಿ 26, 1950ರಲ್ಲಿ ಸಂವಿಧಾನವನ್ನು ಜಾರಿಗೆ ತಂದಿತು.
ಅಂದಿನಿಂದ ರಾಜ ಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವ ಅಂದರೆ ಸಾರ್ವಭೌಮ ದೇಶವಾಯಿತು. ಈ ಈ ಸುಸಂದರ್ಭವನ್ನು ಗಣರಾಜ್ಯ ಎಂದು ಘೋಷಿಸಿ ಅಂದಿನಿಂದ ಜನವರಿ 26 ಅನ್ನು ರಿಪಬ್ಲಿಕ್ ಡೇ ಎನ್ನುವುದಾಗಿ ಆಚರಿಸಲಾಗುತ್ತದೆ.
ಸಂವಿಧಾನ ಸಭೆಯು ತನ್ನ ಮೊದಲ ಅಧಿವೇಶನವನ್ನು ಡಿಸೆಂಬರ್ 9, 1946 ರಂದು ಮತ್ತು ಕೊನೆಯ ಅಧಿವೇಶನವನ್ನು ನವೆಂಬರ್ 26, 1949 ರಂದು ನಡೆಸಿತು. ಆಮೇಲೆ ಒಂದು ವರ್ಷದ ನಂತರ ಸಂವಿಧಾನವನ್ನು ಅಂಗೀಕರಿಸಲಾಯಿತು. ಡಾ ಬಿಆರ್ ಅಂಬೇಡ್ಕರ್ ಅವರು ಸಂವಿಧಾನದ ಕರಡು ಸಮಿತಿಯ ನೇತೃತ್ವ ವಹಿಸಿದ್ದರು ಮತ್ತು ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ರ ಸವಿನೆನಪಿಗಾಗಿ ಭಾರತವು ಪ್ರತಿ ವರ್ಷ ನವೆಂಬರ್ 26ರಂದು ಸಂವಿಧಾನ ದಿನವನ್ನು ಆಚರಿಸುತ್ತದೆ.
ಜನವರಿ 26ರಂದೇ ಆಚರಣೆ ಏಕೆ ?
1929 ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ, ಪೂರ್ಣ ಸ್ವರಾಜ್ ಘೋಷಣೆ ಅಥವಾ “ಭಾರತದ ಸ್ವಾತಂತ್ರ್ಯದ ಘೋಷಣೆ” ಯನ್ನು ಘೋಷಿಸಲಾಯಿತು, ಮತ್ತು 26 ಜನವರಿಯನ್ನು 1930 ರಲ್ಲಿ ಸ್ವಾತಂತ್ರ್ಯ ದಿನವೆಂದು ಘೋಷಿಸಲಾಯಿತು. ಆದರೆ ಈ ಹೆಬ್ಬಯಕೆ 1947ರ ವರೆಗೂ ಈಡೇರಲಿಲ್ಲ. ನಂತರ ಸ್ವಾತಂತ್ರ್ಯ ಸಿಕ್ಕು ಸಂವಿಧಾನ ಜಾರಿ ಮಾಡುವ ಸಮಯದಲ್ಲಿ ಹಳೆಯ ನಿರ್ಣಯದಂತೆ ಜನವರಿ 26 ಅನ್ನು ಆಯ್ಕೆ ಮಾಡಿಕೊಂಡು ಸಂವಿಧಾನವನ್ನು ಜಾರಿಗೊಳಿಸಲಾಯಿತು. ಅಂದಿನಿಂದ ದೇಶ ಗಣರಾಜ್ಯವಾಗಿ ಹೊರಹೊಮ್ಮಿತು.
ಆಚರಣೆಗಳು
ದೇಶದಲ್ಲಿ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನದಂದು, ಅಧ್ಯಕ್ಷರು ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ ಮತ್ತು ನಂತರ ಅದ್ಭುತವಾದ ಮಿಲಿಟರಿ ಮತ್ತು ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸುತ್ತಾರೆ. ಹಾಗೆಯೇ ಭಾರತದ ರಾಷ್ಟ್ರಪತಿಗಳು ದೇಶದ ಅರ್ಹ ನಾಗರಿಕರಿಗೆ ಪದ್ಮ ಪ್ರಶಸ್ತಿಗಳನ್ನು ವಿತರಿಸುತ್ತಾರೆ ಮತ್ತು ವೀರ ಸೈನಿಕರಿಗೆ ಪರಮವೀರ ಚಕ್ರ, ಅಶೋಕ ಚಕ್ರ ಮತ್ತು ವೀರ ಚಕ್ರವನ್ನು ನೀಡಲಾಗುತ್ತದೆ.
ಮೆರವಣಿಗೆ ಸಮಯ ಮತ್ತು ಥೀಮ್:
ಗಣರಾಜ್ಯೋತ್ಸವ 2024ರ ಪರೇಡ್ ಥೀಮ್ ‘ವಿಕ್ಷಿತ್ ಭಾರತ್’ ಮತ್ತು ‘ಭಾರತ್ - ಲೋಕತಂತ್ರ ಕಿ ಮಾತೃಕಾ’, ಇದು ಪ್ರಜಾಪ್ರಭುತ್ವದ ಪೋಷಕರಾಗಿ ಭಾರತದ ಪಾತ್ರವನ್ನು ಒತ್ತಿಹೇಳುತ್ತದೆ ಮತ್ತು ಜನವರಿ 26 ರಂದು ಶುಕ್ರವಾರ ಬೆಳಿಗ್ಗೆ 10:30 ಕ್ಕೆ ನವದೆಹಲಿಯ ಕರ್ತವ್ಯ ಪಥ್ನಲ್ಲಿ ಪ್ರಾರಂಭವಾಗಲಿದೆ. ಮೆರವಣಿಗೆಯಲ್ಲಿ 95-ಸದಸ್ಯ ಮೆರವಣಿಗೆಯ ತುಕಡಿ ಮತ್ತು 33-ಸದಸ್ಯ ಬ್ಯಾಂಡ್ ತುಕಡಿ ಕೂಡ ಇರುತ್ತದೆ.
ಇದು ಸುಮಾರು 90 ನಿಮಿಷಗಳವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಸ್ಥಳವು 77,000 ಆಸನ ಸಾಮರ್ಥ್ಯವನ್ನು ಹೊಂದಿದ್ದು, 42,000 ಆಸನಗಳನ್ನು ಸಾರ್ವಜನಿಕರಿಗೆ ಕಾಯ್ದಿರಿಸಲಾಗಿದೆ.
ಹೆಚ್ಚಿನ ಜನರಿಗೆ ಗೊತ್ತಿಲ್ಲದ ವಿಚಾರಗಳು
ಭಾರತವು ಈ ಬಾರಿ 75ನೇ ಗಣತಂತ್ರ ದಿನವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದ ಸಂವಿಧಾನ ರಚನೆಯ ಸಂಬಂಧ ಕೆಲವು ವಿಶೇಷವಾದ ಘಟನೆಗಳ ಬಗ್ಗೆ ತಿಳಿದುಕೊಳ್ಳೋಣ . ಭಾರತದ ಸಂವಿಧಾನವನ್ನು 1949ರ ನವೆಂಬರ್ 26ರಂದು ಅಂಗೀಕರಿಸಲಾಗಿತ್ತು. ಹೀಗಾಗಿ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ರ ಸವಿನೆನಪಿಗಾಗಿ ಭಾರತವು ಪ್ರತಿ ವರ್ಷ ನವೆಂಬರ್ 26ರಂದು ಸಂವಿಧಾನ ದಿನವನ್ನು ಆಚರಿಸುತ್ತದೆ. ಭಾರತದ ಸಂವಿಧಾನವು ವಿಶ್ವದ ಅತೀ ದೊಡ್ಡ ಸಂವಿಧಾನವಾಗಿದೆ. ಈ ಸಂವಿಧಾನವನ್ನು ಡಾ. ಬಿಆರ್ ಅಂಬೇಡ್ಕರ್ ಅವರು ಬ್ರಿಟನ್, ಜರ್ಮನಿ, ಕೆನಡಾ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಅನೇಕ ದೇಶಗಳ ಸಂವಿಧಾನಗಳಿಂದ ಸ್ಪೂರ್ತಿ ಪಡೆದು ರಚಿಸಲಾಗಿದೆ.
ಇನ್ನೊಂದು ಗಮನಿಸಬೇಕಾದ ವಿಚಾರ ಏನೆಂದರೆ ಭಾರತೀಯ ಸಂವಿಧಾನವನ್ನು ಸಂಪೂರ್ಣ ಕೈ ಬರಹದಲ್ಲಿಯೇ ಬರೆಯಲಾಗಿದೆ. ಪಾರ್ಲಿಮೆಂಟ್ನ ಲೈಬ್ರರಿಯಲ್ಲಿ ಇಂದಿಗೂ ಭಾರತದ ಕೈ ಬರಹದ ಸಂವಿಧಾನದ ಪ್ರತಿಯನ್ನು ಸಂರಕ್ಷಿಸಿ ಇಡಲಾಗಿದೆ. ಇದು ಕೈ ಬರಹದಲ್ಲಿ ಬರೆಯಲಾದ ವಿಶ್ವದ ಅತೀ ದೊಡ್ಡ ಸಂವಿಧಾನ ಕೂಡ ಹೌದು. 2 ವರ್ಷಗಳ ಸಮಯಾವಕಾಶ ತೆಗೆದುಕೊಂಡು ಭಾರತದ ಸಂವಿಧಾನ ರಚಿಸಲಾಗಿದೆ. ನಿಖರವಾಗಿ ಹೇಳಬೇಕು ಎಂದರೆ ಸರಿಯಾಗಿ 11 ತಿಂಗಳು 18 ದಿನಗಳ ಸಮಯಾವಕಾಶವನ್ನು ತೆಗೆದುಕೊಂಡು ಭಾರತದ ಸಂವಿಧಾನವನ್ನು ಬರೆಯಲಾಗಿದೆ. ಸಂವಿಧಾನದ ಮೂಲ ಪ್ರತಿಯನ್ನು ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಕೈ ಬರಹದಲ್ಲಿ ಬರೆಯಲಾಗಿದೆ.
ಸಂವಿಧಾನವನ್ನು ಕೈ ಬರಹದಲ್ಲಿ ಬರೆದಿದ್ದ ನಾರಾಯಣ ರಾಯ್ಝಾದಾ
ಸಂವಿಧಾನ ರಚನೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದವರು ಡಾ. ಬಿಆರ್ ಅಂಬೇಡ್ಕರ್ . ಇದೇ ಕಾರಣಕ್ಕೆ ಅಂಬೇಡ್ಕರ್ರಿಗೆ ಸಂವಿಧಾನ ಶಿಲ್ಪಿ ಎಂಬ ಬಿರುದನ್ನೂ ನೀಡಲಾಗಿದೆ. ಆದರೆ ಸಂವಿಧಾನವನ್ನು ಪ್ರೇಮ್ ಬಿಹಾರಿ ನಾರಾಯಣ ರಾಯ್ಝಾದಾ ಎಂಬವರು ಕೈ ಬರಹದಲ್ಲಿ ಬರೆದಿದ್ದರು.
ಆರು ತಿಂಗಳ ಅವಧಿಯನ್ನು ಪಡೆದುಕೊಂಡು ಕೈ ಬರಹದಲ್ಲಿ ಬರೆದಿದ್ದಾರೆ. ಅದನ್ನು ಬರೆಯಲು ಪ್ರೇಮ್ ಬಿಹಾರಿ ನಾರಾಯಣ ರಾಯ್ಝಾದಾ ಅವರು 433 ಪೆನ್ ನಿಬ್ಗಳನ್ನು ಬಳಕೆ ಮಾಡಿದ್ದರಂತೆ..! ಭಾರತದ ಸಂವಿಧಾನವನ್ನು ರೂಪಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದ ಡಾ. ಬಿ ಆರ್ ಅಂಬೇಡ್ಕರ್ನ್ನು ಭಾರತ ಇಂದಿಗೂ ಆರಾಧಿಸುತ್ತಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ರ ಮಾರ್ಗದರ್ಶನದಲ್ಲಿ ರೂಪುಗೊಂಡ ಭಾರತದ ಈ ಸಂವಿಧಾನ ಇಂದಿಗೂ ಭಾರತಕ್ಕೆ ಆದರ್ಶಪ್ರಾಯವಾಗಿದೆ.