ಶಿಖಂಡಿಯನ್ನು ಕಾಪಾಡಿದ ಶ್ರೀಕೃಷ್ಣ:-
ಮಹಾಭಾರತದಲ್ಲಿ ಕಲ್ಪನೆಗೂ ಬರದ ವಿಶಿಷ್ಟ ಪಾತ್ರ 'ಶಿಖಂಡಿ'. ಪಿತಾಮಹ 'ಭೀಷ್ಮರ' ಸಾವಿನ ದೇವತೆ. ಭೀಷ್ಮರ ನೋವು, ಆತಂಕ, ಅತಂತ್ರ, ಅಸಹಾಯಕತೆಗಳಿಗೆಲ್ಲಾ ತೆರೆ ಎಳೆದ ಮುಕ್ತಿದಾತೆ. ಮಹಾಭಾರತದಲ್ಲಿ ಶಿಖಂಡಿ'ಯದು ಕಾರ್ಯ-ಕಾರಣ ಜನ್ಮ.
ಗುರು ದ್ರೋಣಾಚಾರ್ಯರು ಗುರುಕುಲಕ್ಕೆ ಸೇರಲು ಬಂದಿದ್ದ ಶಿಕ್ಷಣಾರ್ಥಿಗಳ ಸಂದರ್ಶನದ ಪರೀಕ್ಷೆ ಮಾಡಿ ತಮ್ಮ ಗುರುಕುಲದ ಶಿಷ್ಯರನ್ನಾಗಿ ಸ್ವೀಕರಿಸುತ್ತಿದ್ದರು. ಒಂದು ದಿನ ಇಂಥದೇ ಪರೀಕ್ಷೆ ನಡೆಸುತ್ತಿದ್ದರು. ಅದಾಗಲೇ ಕೆಲವು ವಿದ್ಯಾರ್ಥಿಗಳ ಪರೀಕ್ಷೆ ಮುಗಿಸಿದ್ದರು. ಆಗ ದ್ರೋಣರ ಸಹಾಯಕ 'ಶಂಕ' ಒಬ್ಬ ಶಿಷ್ಯನನ್ನು ಕರೆತಂದನು. ಆ ಹುಡುಗ ನೋಡಲು ಹುಡುಗಿಯಂತೆ ಕಾಣುತ್ತಿದ್ದ. ಆದರೆ 'ಶಂಕ' ಹುಡುಗ ಎಂದು ಪರಿಚಯ ಮಾಡಿಕೊಟ್ಟ. ಸರಿಯಾಗಿ ಗಮನಿಸಿದಾಗ ಹುಡುಗನ ಮೈ ರೇಷ್ಮೆಯಂತೆ ನುಣುಪಾಗಿದ್ದು, ಹುಡುಗಿಯರಂತೆ, ಕಣ್ಣು ,ಮೂಗು ,ಮತ್ತು ಬಾಯಿ ಅಂದವಾಗಿದ್ದು, ದೇಹವು ಕೋಮಲವಾಗಿದ್ದು ಮಿಂಚುತ್ತಿತ್ತು. ಮೆಲ್ಲ, ಮೆಲ್ಲನೆ ನಡೆಯುತ್ತಾ ಬರುತ್ತಿದ್ದರೆ ನಡಿಗೆಯಲ್ಲಿ ಏನೋ ಒಂದು ತರಹ ಬಳುಕುವಿಕೆ ಕಾಣುತ್ತಿದ್ದು, ಆಚಾರ್ಯರು ಗಮನಿಸುತ್ತಿದ್ದರೆ, ಅನುಮಾನ ಕಾಡಿತು. ಅವರು ಕುತೂಹಲಗೊಂಡರು.
ಆ ಹುಡುಗ ದ್ರೋಣಾಚಾರ್ಯರ ಮುಂದೆ ಬಂದು ಕೈಜೋಡಿಸಿ ವಿದೇಯ ವಿದ್ಯಾರ್ಥಿಯಂತೆ ನಿಂತನು. ದ್ರೋಣಾಚಾರ್ಯರು ಹುಡುಗನ ವಿನಯಕ್ಕೆ ಮನಸೋತು, ಅನುಕಂಪದ ಧ್ವನಿಯಲ್ಲಿ ಎರಡು ದಿನಗಳಿಂದ ಯುದ್ಧ ಶಾಲೆಯಲ್ಲಿ ಬಂದು ನನಗಾಗಿ ಕಾಯುತ್ತಾ ಕುಳಿತ ವಿದ್ಯಾರ್ಥಿ ನೀನೇನಾ? ಎಂದು ಕೇಳಿದರು. ಹೌದು ಗುರುಗಳೇ ಎಂದನು. ನಿನ್ನ ಹೆಸರೇನು? ನನ್ನ ಹೆಸರು ಶಿಖಂಡಿ ಎಂದ, ಅವನ ಧ್ವನಿ ಹುಡುಗಿಯರಂತೆ ಮಧುರವಾಗಿತ್ತು. ದ್ರೋಣಾಚಾರ್ಯರು ಶಿಷ್ಯನನ್ನಾಗಿ ಸ್ವೀಕರಿಸುವ ತನಕ ಗುಟುಕು ನೀರನ್ನು ಕುಡಿಯುವುದಿಲ್ಲ. ಎಂದು ಶಪಥ ಮಾಡಿ ಗುರುಕುಲದ ಹತ್ತಿರವೇ ಕಾಯುತ್ತಾ ಕುಳಿತಿದ್ದನು.
'ಶಿಖಂಡಿ' ಆಗಲೇ ಧನುರ್ವಿದ್ಯೆ, ವೇದಾಧ್ಯಯನ, ಕಲಿತಿದ್ದನು. ಆದರೆ ಗದಾಯುದ್ಧ, ಮಲ್ಲಯುದ್ಧ,ಸೇರಿದಂತೆ ಇನ್ನೂ ಅನೇಕ ಯುದ್ಧ ಶಾಸ್ತ್ರಗಳನ್ನು ಕಲಿಯಲೇ ಬೇಕೆಂದು ಹಟ ತೊಟ್ಟಿದ್ದ. ಆದರೆ ಬೇರೆ ಗುರುಗಳು ಕಲಿಸಲು ಒಪ್ಪಲಿಲ್ಲ. ಶಿಖಂಡಿಯ ಒದ್ದಾಟವನ್ನು ಗಮನಿಸದ ದ್ರೋಣಾಚಾರ್ಯರು ಸ್ವಲ್ಪ ಕೀಟಲೆ ಮಾಡಬೇಕೆಂದು, ನಾನು ಹುಡುಗಿರಿಗೆ ಯುದ್ಧಕಲೆಯನ್ನು ಕಲಿಸಿ ಕೊಡುವುದಿಲ್ಲ ಎಂದರು. ಗಾಬರಿಯಿಂದ ಗುರುಗಳೇ ದಯವಿಟ್ಟು ನನ್ನ ನೋವನ್ನು ಅರ್ಥ ಮಾಡಿಕೊಳ್ಳಿ. ನನ್ನ ಕಥೆ ಹೇಳುತ್ತೇನೆ ಎಂದು ಆತಂಕದಿಂದ ಅವನ ಕುಲ, ಗೋತ್ರ ಎಲ್ಲವನ್ನು ತಿಳಿಸುತ್ತಾನೆ. ನಾನು ಬ್ರಾಹ್ಮಣನಲ್ಲ, ಕ್ಷತ್ರಿಯ ಕುಮಾರ, ಕೌಶಿಕ ಗೋತ್ರದವನು.ನನ್ನ ತಾಯಿ ಕಾಶಿರಾಜನ ಮಗಳು. ನನ್ನ ತಂದೆ ನಿಮ್ಮ ಸಹಪಾಠಿ ಹಾಗೂ ಶತ್ರುವು ಆದ ಪಾಂಚಾಲ ದೇಶದ ರಾಜ 'ದ್ರುಪದ' ಎಂದನು. ಇದನ್ನು ಕೇಳಿದ ದ್ರೋಣಾಚಾರ್ಯರ ಮುಖವು ವಿವರ್ಣವಾಯಿತು.
'ಶಿಖಂಡಿ' ಕುರಿತು ಆರ್ಯಾವರ್ತದಲ್ಲಿ, ಹಲವು ವದಂತಿಗಳು ಹರಡಿತ್ತು. ದ್ರುಪದನ ಪತ್ನಿ ಕಾಶಿರಾಜನ ಮಗಳಂತೆ, ಅವಳಿಗೆ ಹುಟ್ಟಿರುವ ಹೆಣ್ಣು ಶಿಶುವನ್ನು ಕಾಶಿ ರಾಜನ ಆಸ್ಥಾನದಲ್ಲಿ 'ಗಂಡಿನಂತೆ' ಬೆಳೆಸುತ್ತಿದ್ದಾಳೆ. ತಾಯಿ ಅಕಾಲ ಮೃತ್ಯು ಹೊಂದಿದಾಗ ಪಾಂಚಾಲ ರಾಜ್ಯಕ್ಕೆ ಶಿಖಂಡಿಯನ್ನು ತಂದು ಬಿಡಲಾಗಿತ್ತು. ಆದರೆ ದ್ರುಪದನಿಗೆ ಇದು ಇಷ್ಟವಿರಲಿಲ್ಲ. ಹಾಗಾಗಿ ಶಿಖಂಡಿಗೆ ನೀನು ಹೆಣ್ಣಾಗಿ ಜನಿಸಿದ್ದರಿಂದ, ಹುಡುಗಿಯಂತೆ ಬೆಳೆಯಬೇಕು ಎಂದು ಬಿಟ್ಟಿದ್ದ. ಇದರಿಂದ ಶಿಖಂಡಿಗೆ ಬಹಳ ಬೇಸರವಾಗಿತ್ತು. ಆದರೆ ಶಿಖಂಡಿಗೆ ಕಲಿತಿರುವ ಯುದ್ಧಕಲೆಯಲ್ಲಿ ಪರಿಣತಿ ಪಡೆಯಬೇಕು. ಸಹೋದರರಾದ ದೃಷ್ಟದ್ಯುಮ್ನ, ಸತ್ಯಜಿತರ ಜೊತೆ ತಾನು ಸಹ ಯುದ್ಧ ಕೌಶಲ್ಯವನ್ನು ಕಲಿಯಬೇಕು ಎಂದು ಬಹಳ ಹಠ ಮಾಡಿದಳು. ಆದರೆ ತಂದೆ ದ್ರುಪದ ಮಾತ್ರ ಅವಳಿಗೆ ಯಾವುದೇ ರೀತಿಯ ಸಹಕಾರ ಕೊಡಲಿಲ್ಲ. ತಾಯಿಯ ಪಾಲನೆ-ಪೋಷಣೆ, ಶಿಕ್ಷಣಗಳಿಂದಾಗಿ ಶಿಖಂಡಿ ಹೆಚ್ಚುಕಡಿಮೆ ಗಂಡು ಹುಡುಗನಂತೆ ಆಗಿದ್ದ. ಅವಳಲ್ಲಿ ಹುಡುಗನ ಸೆಳೆತವಿತ್ತು. ಆದರೆ ಹುಡುಗರ ರೀತಿ ನೀತಿಗಳಿಂದ ತುಂಬಾ ಭಿನ್ನವಾಗಿದ್ದಳು. ಇಂತಹ ವಿಚಿತ್ರವಾದ ಮನಸ್ಥಿತಿಯಲ್ಲಿ ತಾನು ತಂದೆ, ಅಣ್ಣಂದಿರಂತೆ ವೀರ, ಶೌರ್ಯತೆಗಳನ್ನು ತನ್ನಲ್ಲೂ ಬೆಳೆಸಿಕೊಳ್ಳಬೇಕು ಇದಕ್ಕಾಗಿ ಗಂಡು ಹುಡುಗನಾಗಲೇಬೇಕೆಂಬ ಹಠವನ್ನು ಬೆಳೆಸಿಕೊಂಡು, ಹುಡುಗಿಯರ ಸ್ವಭಾವಗಳನ್ನು ಅದುಮಿಟ್ಟುಕೊಂಡಿದ್ದ.
ತಂದೆ, ಅಣ್ಣ ,ಅಕ್ಕ ,ಮಂತ್ರಿ, ಹೊರತುಪಡಿಸಿ ಬೇರೆ ಯಾರಿಗೂ 'ಶಿಖಂಡಿ' ಹುಡುಗಿ ಎಂದು ಗೊತ್ತಾಗದಂತೆ ಮುಚ್ಚಿಟ್ಟಿದ್ದರು. ಆದರೂ ಅಲ್ಲಲ್ಲಿ ಇವಳ ಬಗ್ಗೆ ಅನುಮಾನವಿದ್ದ ಕಾರಣ, ಇವಳಿಗೆ ಗದಾಯುದ್ಧ ,ಮಲ್ಲಯುದ್ಧ, ಕಲಿಸಿಕೊಡಲು ಯಾವುದೇ ಗುರುಗಳು ಒಪ್ಪಲಿಲ್ಲ. ಶಿಖಂಡಿ ಹೆಣ್ಣು ಎಂಬ ರಹಸ್ಯವನ್ನು ರಾಜ ಪರಿವಾರದವರು ಮುಚ್ಚಿಟ್ಟು ,ಗಂಡು ಎಂದೇ ಬಿಂಬಿಸಲು ಗುರು ದ್ರೋಣಾಚಾರ್ಯರ ಬಳಿಗೆ ಬರುವ ಮೊದಲೇ, 'ದರ್ಶನ' ರಾಜ್ಯದ ರಾಜ 'ಹಿರಣ್ಯವರ್ಮನ' ಮಗಳು ಆರು ವರ್ಷದ ರಾಜಕುಮಾರಿಯನ್ನು ಕೊಟ್ಟು ಶಿಖಂಡಿಗೆ ಮದುವೆ ಮಾಡಿಸಿದ್ದರು. ಹೆಣ್ಣಿಗೆ ಹೆಣ್ಣಿನ ಜೊತೆ ಮದುವೆಯನ್ನು ಮಾಡಿದರು. ಈಗ ರಾಜಕುಮಾರಿಯನ್ನು ದ್ರುಪದನ ರಾಜ್ಯ ಪಾಂಚಾಲದ ರಾಜಧಾನಿ 'ಕಾಂಪಿಲ್ಯ'ಕ್ಕೆ ಕರೆದುಕೊಂಡು ಬರುತ್ತೇನೆ ಎಂದು ದರ್ಶನದ ರಾಜ ಒತ್ತಾಯ ಮಾಡಿದ್ದ.
ಈ ಕಾರಣಗಳಿಂದಾಗಿ ಶಿಖಂಡಿಯು ತಪ್ಪಿಸಿಕೊಂಡು ದ್ರೋಣಾಚಾರ್ಯರ ಬಳಿ ಬಂದಿದ್ದ. ಈ ಎಲ್ಲಾ ವಿಚಾರಗಳನ್ನು ತಿಳಿದ ದ್ರೋಣಾಚಾರ್ಯರಿಗೆ ಒಂದು ಸಂದೇಹ ಕಾಡಿತು, ರಾಜ್ಯದ ಎಲ್ಲರ ಕಣ್ಣುತಪ್ಪಿಸಿ ಅದರಲ್ಲೂ ತಂದೆ ದ್ರುಪದನ ಕಣ್ಣುತಪ್ಪಿಸಿ ಇಲ್ಲಿಗೆ ಹೇಗೆ ಬಂದೆ?ಎಂಬ ಅನುಮಾನವನ್ನು ಶಿಖಂಡಿಯ ಮುಂದಿಟ್ಟರು. ಶಿಖಂಡಿ, ಹೌದು ಆಚಾರ್ಯರೇ ಎಲ್ಲರ ಕಣ್ಣು ತಪ್ಪಿಸಿ ರಾತೋರಾತ್ರಿ ತಪ್ಪಿಸಿಕೊಂಡು ಓಡಿಬಂದೆ. ನನಗೆ ಬೇರೆ ದಾರಿಯೇ ಇರಲಿಲ್ಲ. 'ಕಾಂಪಿಲ್ಯ' ರಾಜ್ಯದಿಂದ ತಪ್ಪಿಸಿಕೊಳ್ಳ ಬೇಕಿತ್ತು ಅಥವಾ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು, ಎರಡು ಆಯ್ಕೆಗಳಲ್ಲಿ ಯಾವುದಾದರೂ ಒಂದನ್ನು ನಾನು ಮಾಡಲೇಬೇಕಿತ್ತು. ಏಕೆಂದರೆ ನನಗೆ ಮದುವೆ ಮಾಡಿಸಿದ ನನ್ನ ಹೆಂಡತಿ ರಾಜ್ಯಕ್ಕೆ ಬರುವುದರೊಳಗೆ ತಪ್ಪಿಸಿಕೊಳ್ಳಲೇಬೇಕು ಎಂಬ ಯೋಚನೆ ಹಾಗೇ ಚಿಂತೆಯಲ್ಲಿರುವಾಗಲೇ, ನಿಮ್ಮ ಬಳಿ ಬರಲು ಅವರೇ ಹೇಳಿದ್ದು .
ಮಾತನ್ನು ಅಲ್ಲಿಗೆ ತಡೆದ, ದ್ರೋಣಾಚಾರ್ಯರು, ಅವರೇ, ಅವರು ಅಂದರೆ ಯಾರು?ನನ್ನ ಬಳಿ ಹೋಗು ಎಂದು ಹೇಳಿದ್ದು, ಈ ರೀತಿ ಮಾರ್ಗದರ್ಶನ ಮಾಡಿ, ಹೆಣ್ಣೊಬ್ಬಳಿಗೆ ಶಿಕ್ಷಣವನ್ನು ಕೊಡುತ್ತೇನೆಂದು ಹೇಳಿದ ಮೂರ್ಖ ಯಾರು? ಮೊದಲು ಹೇಳು ಎಂದು ಸಿಟ್ಟಿನಿಂದ ಕೇಳಿದರು. ಶಿಖಂಡಿ,"ಈ ಮೂರು ಲೋಕಗಳಲ್ಲಿಯೂ, ಹುಡುಗಿಯೊಬ್ಬಳನ್ನು ಯೋಧನಾಗಿ ಮಾಡುವ ತಾಕತ್ತಿರುವ, ಗುರುಗಳಾದ ಅವರೇ 'ದ್ರೋಣಾಚಾರ್ಯರು', ಹೀಗೆ ಹೇಳಿದ್ದು, ಬೇರೆ ಯಾರೂ ಅಲ್ಲ 'ವಾಸುದೇವ ಶ್ರೀಕೃಷ್ಣ'ಎಂದು ಹೇಳಿದನು. ಈ ಹೆಸರು ಕೇಳಿದೊಡನೆ ದ್ರೋಣಾಚಾರ್ಯರು ಬೆಚ್ಚಿಬಿದ್ದರು. ಕೂತಲ್ಲಿಂದ ಧಿಗ್ಗನೆ ಎದ್ದು, ಏನು?ಹೀಗೆ ಹೇಳಿದ್ದು ಕೃಷ್ಣನೇ, ಹೀಗ್ಯಾಕೆ ಕೃಷ್ಣ ಹೇಳಿದ ಎಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದಾಗ 'ಶಿಖಂಡಿಯೇ' ಮುಂದುವರಿಸಿ, ಕೃಷ್ಣನು, ಕಾಂಪಿಲ್ಯಕ್ಕೆ ಬಂದಿದ್ದಾಗ, ಅವನ ಗೆಳೆಯ ಶ್ವೇತಕೇತುವಿನ ಮೂಲಕ ಕೃಷ್ಣನನ್ನು ಬೇಟಿಯಾಗಿ ನನ್ನ ಕಷ್ಟವನ್ನೆಲ್ಲ ಹೇಳಿಕೊಳ್ಳಬೇಕು, ನಾನು ಸಹ ವೀರಯೋಧರಂತೆ ಗಂಡಾಗಬೇಕೆಂದು,ನಾನು ಎಷ್ಟೇ ಕಷ್ಟಪಟ್ಟರೂ 'ಹೆಣ್ತನ 'ಎನ್ನುವುದು ನನ್ನನ್ನು ಹೆಜ್ಜೆಹೆಜ್ಜೆಗೂ ಅಡೆತಡೆಗಳನ್ನು ಉಂಟುಮಾಡಿದ್ದು ಎಂಬ ಕತೆಯನ್ನು ಸವಿಸ್ತಾರವಾಗಿ ಹೇಳಿದೆ, ಈ ರೀತಿಯಾಗಿ ಕೃಷ್ಣನ ಮುಂದೆ ನನ್ನ ಕಷ್ಟಗಳನ್ನೆಲ್ಲ ಹೇಳಿಕೊಂಡಾಗಲೇ ಅರ್ಧ ಕಷ್ಟ ಆಗಲೇ ಕಳೆದು ಹೋಯಿತು. ಈ ರೀತಿ ಆತ್ಮೀಯತೆಯಿಂದ ಕೃಷ್ಣನು, ನನ್ನ ಮಾತುಗಳನ್ನೆಲ್ಲ ಕೇಳಿಸಿಕೊಂಡು, ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ತೀರ್ಮಾನ ಮಾಡಿದ್ದ ನನ್ನನ್ನು ಸಮಾಧಾನಪಡಿಸಿ ಜೀವನೋತ್ಸಾಹ ತುಂಬಿದ ಶ್ರೀಕೃಷ್ಣ. ನಂತರ"ಧೈರ್ಯ ನನ್ನು ತೆಗೆದುಕೋ 'ಶಿಕಂಡಿ' ಆತ್ಮಹತ್ಯೆ ಮಾಡಿಕೊಂಡು ಸಾಯುವುದಾದರೆ ಹೇಡಿಯಂತೆ ಸಾಯಬೇಡ ಧೈರ್ಯವಾಗಿ ಸಾಯಿ. ನೀನು ಗಂಡಸೇ ಹೌದು, ಏಕೆಂದರೆ ಯಾವುದೇ ಧೈರ್ಯ ಭಾವದಲ್ಲಿದೆಯೇ ಹೊರತೂ ದೇಹದಲ್ಲಲ್ಲ ಹೀಗಾಗಿ ನೀನು 'ಗಂಡಸು' ತಪ್ಪೇನಿಲ್ಲ. ಆದರೆ ನೀನು ನಿಜವಾದ ಕ್ರಿಯಾಶೀಲ ಪುರುಷನು ಎನಿಸಿಕೊಳ್ಳಬೇಕಾದರೆ ಈ ಕೂಡಲೇ ದ್ರೋಣಾಚಾರ್ಯರ ಬಳಿ ಹೋಗು ಆಚಾರ್ಯರಲ್ಲಿ ಅತ್ಯುತ್ತಮ ಶ್ರೇಷ್ಠರಾದ ಆಚಾರ್ಯರು 'ದ್ರೋಣಾಚಾರ್ಯರು' ಅವರ ಕೈಯಲ್ಲಿ 'ಮಣ್ಣು ಕೂಡ ಬಂಗಾರ ಆಗುತ್ತೆ'. ನೀನು ನಿನ್ನ ತಂದೆಯ ಅನುಮತಿ ಇಲ್ಲದೆ ಸಾಯಲು ಹೊರಟಿದ್ದೀಯ ಅದರ ಬದಲು ತಂದೆಯ ಅನುಮತಿ ಇಲ್ಲದೆ ಇಲ್ಲಿಂದ ಓಡಿಹೋಗು. ವೀರನಾಗಿ ಹಿಂದಿರುಗು. ಆಗ ನಿನ್ನ ತಂದೆ ಸ್ವೀಕರಿಸಬಹುದು. ಎಂದು ಕೃಷ್ಣ ಧೈರ್ಯ ತುಂಬಿದ.
ನಾನು ಸಂದೇಹಿತವಾಗಿ, ಆದರೆ "ಕೃಷ್ಣ ನನ್ನ ತಂದೆ ಮತ್ತು ಆಚಾರ್ಯರು ಒಬ್ಬರಿಗೊಬ್ಬರು ಶತ್ರುಗಳು ಹೀಗಿರುವಾಗ ಅವರು ನನ್ನ ನ್ನು ಶಿಷ್ಯನಾಗಿ ಸ್ವೀಕರಿಸದಿದ್ದರೆ? ಎಂಬ ಪ್ರಶ್ನೆ ಮುಂದಿಟ್ಟ ಶಿಖಂಡಿಗೆ, ದ್ರೋಣಾಚಾರ್ಯರು ಉತ್ತಮರಲ್ಲಿ ಉತ್ತಮ ಗುರುಗಳು, ಅವರ ಹತ್ತಿರ ಹೋಗುವಾಗ, ದ್ವೇಷ, ಹಠ, ಎಲ್ಲವನ್ನು ಮರೆತು, ಮುಕ್ತ ಹೃದಯದಿಂದ , ಸಮರ್ಪಣಾ ಭಾವದಿಂದ, ಅವರಿದ್ದಲ್ಲಿಗೆ ಹೋಗು ಅವರು ನಿನಗೆ ವಿದ್ಯೆಯನ್ನು ಕಲಿಸಿ, ಗಂಡಸರಂತೆ
ಮಾಡುತ್ತಾರೆ. ಧೈರ್ಯವಾಗಿ ಹೋಗು ಎಂದು ಕೃಷ್ಣನೇ ಹೇಳಿ ಕಳಿಸಿದ್ದು. ಅದರಂತೆ ಶಿಖಂಡಿ ಬಂದಿದ್ದಳು. ಸಕಲವನ್ನು ಬಲ್ಲ ಶ್ರೀಕೃಷ್ಣನ ಚಾತುರ್ಯಕ್ಕೆ ಬೆರಗಾಗದವರೇ ಇಲ್ಲ. ಶಿಖಂಡಿ ಮಾತುಗಳನ್ನು ಶ್ರೀಕೃಷ್ಣನೇ ಮಾತಾಡಿದ್ದ. ಜಗನ್ನಾಟಕ ಸೂತ್ರಧಾರನ ನಾಟಕ ಫಲಿಸಿತು. ದ್ರೋಣಾಚಾರ್ಯರು ಮಂತ್ರ ಮುಗ್ಧರಂತೆ ಮಾತುಗಳನ್ನೆಲ್ಲ ಕೇಳಿದರು. ಶಿಖಂಡಿಯನ್ನು ಶಿಷ್ಯೆಯನ್ನಾಗಿ ಒಪ್ಪಿಕೊಂಡು ಶಿಷ್ಯನನ್ನಾಗಿ ಮಾಡಿದರು. ಅವನಿಗೆ ಬೇಕಾದ ವಿದ್ಯೆಯನ್ನೆಲ್ಲ ಕಲಿಸಿ, ಅವಳ ಆಸೆಯಂತೆ ಗಂಡಸನ್ನಾಗಿ ಮಾಡಲು, ದ್ರೋಣಾಚಾರ್ಯ ಸಲಹೆಯಂತೆ ಅವಳು ನಿಷ್ಠೆಯಿಂದ ವ್ರತ, ನಿಯಮಗಳನ್ನು ಆಚರಿಸಿದಳು. ನಂತರ ದ್ರೋಣಾಚಾರ್ಯರು 'ಸ್ಥೂಲಕರ್ಣ' ಎಂಬ ಯಕ್ಷನೊಬ್ಬನ ಬಳಿ ಕಳಿಸಿದರು. ಅಲ್ಲಿ ತಪಸ್ಸನ್ನು ಮಾಡಿ, 'ಗಂಡಾದಳು'. ನಂತರ ಶಿಖಂಡಿ ಭೀಷ್ಮರನ್ನು ಕೊಲ್ಲಲು ಸಜ್ಜಾದಳು.ಈ ಮೂಲಕ ಶ್ರೀಕೃಷ್ಣನು ಮಹಾಭಾರತದಲ್ಲಿ ಹೊಸದೊಂದು ಅಧ್ಯಾಯವನ್ನು ಬರೆದನು.
"ಕೃಷ್ಣ ಎಂದರೆ ಭಯವಿಲ್ಲ ಕೃಷ್ಣಾ ಎನದೆ ಸುಖವಿಲ್ಲ, ಕೃಷ್ಣಾ ಎಂದರೆ, ದಿನವೆಲ್ಲಾ ಬಾಯಾರಿಕೆ ಹಸಿವಿನ ಹಂಗಿಲ್ಲ. ಕೃಷ್ಣ ಹರೇ ಜೈ ಜೈ ಕೃಷ್ಣ ಹರೇ