ಜಿನೀವಾ: ಕೊರೊನಾ ವೈರಸ್ ಸೋಂಕಿಗೆ ತಕ್ಷಣ ಪ್ರತಿಕ್ರಿಯಿಸಿ, ವೈರಸ್‌ನ ಗುಣಲಕ್ಷಣಗಳ (ಜಿನೋಮ್) ಮಾಹಿತಿಯನ್ನು ಹಂಚಿಕೊಂಡಿದ್ದ ಚೀನಾವನ್ನು ಕಳೆದ ಜನವರಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸಾರ್ವಜನಿಕವಾಗಿ ಹೊಗಳಿತ್ತು.
ಆದರೆ ವಾಸ್ತವದಲ್ಲಿ ಹಲವು ಸರ್ಕಾರಿ ಪ್ರಯೋಗಾಲಯಗಳು ವೈರಸ್‌ನ ಜಿನೋಮ್‌ನ ಮಾಹಿತಿಯನ್ನು ಬಹಿರಂಗಪಡಿಸಿದ ಬಳಿಕವಷ್ಟೇ ಚೀನಾದ ಅಧಿಕಾರಿಗಳು ಇದನ್ನು ಬಿಡುಗಡೆಗೊಳಿಸಿದ್ದರು. ಆದರೆ ಔಷಧಿ ಕಂಡುಹಿಡಿಯಲು ಬೇಕಾದಂಥ ಪ್ರಮುಖ ಮಾಹಿತಿಗಳನ್ನೇ ಚೀನಾ ಹಂಚಿಕೊಂಡಿರಲಿಲ್ಲ ಎಂದು ಮಾಹಿತಿ ಇದೀಗ ಬಹಿರಂಗವಾಗಿದೆ.
ಮಾಹಿತಿ ಬಹಿರಂಗಗೊಳಿಸುವುದರ ಮೇಲಿನ ನಿಯಂತ್ರಣ ಹಾಗೂ ಚೀನಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೊಳಗಿದ್ದ ಸ್ಪರ್ಧೆಯೇ ಚೀನಾದ ಈ ನಡೆಗೆ ಕಾರಣ ಎಂದು ಅಸೋಸಿಯೇಟೆಡ್ ಪ್ರೆಸ್ (ಎಪಿ) ನಡೆಸಿದ ಹಲವು ಸಂದರ್ಶನಗಳು, ಆಂತರಿಕ ದಾಖಲೆಗಳು ಹಾಗೂ ಇ-ಮೇಲ್‌ಗಳ ಪರಿಶೀಲನೆಯಿಂದ ಬಹಿರಂಗವಾಗಿದೆ.
ವೈರಾಲಜಿ ಕುರಿತು ವೆಬ್‌ಸೈಟ್ ಒಂದರಲ್ಲಿ ಜನವರಿ 11ರಂದು ಚೀನಾದ ಪ್ರಯೋಗಾಲಯವೊಂದು ಕೊರೊನಾ ವೈರಸ್‌ನ ಜಿನೋಮ್ ಪ್ರಕಟಿಸಿತ್ತು. ಇದಾದ ಬಳಿಕವಷ್ಟೇ ಚೀನಾದ ಆರೋಗ್ಯ ಅಧಿಕಾರಿಗಳು ವೈರಸ್‌ನ ಜಿನೋಮ್ ಬಿಡುಗಡೆಗೊಳಿಸಿದ್ದರು. ಈ ಕುರಿತು ಡಬ್ಲ್ಯುಎಚ್‌ಒಗೆ ಅಗತ್ಯವಿದ್ದ ಮಾಹಿತಿ ನೀಡಲು ಚೀನಾ ಎರಡು ವಾರ ವಿಳಂಬ ಮಾಡಿತ್ತು. ವೈರಸ್‌ನ ಕುರಿತು ಸೂಕ್ತವಾದ ಹಾಗೂ ಸಮಯಕ್ಕೆ ಸರಿಯಾದ ಮಾಹಿತಿಯನ್ನು ಚೀನಾ ಹಂಚಿಕೊಳ್ಳದೇ ಇರುವುದರ ಕುರಿತು ಆಂತರಿಕ ಸಭೆಯಲ್ಲಿ ಡಬ್ಲ್ಯುಎಚ್‌ಒ ಕಳವಳ ವ್ಯಕ್ತಪಡಿಸಿರುವುದೂ ದಾಖಲಾಗಿದೆ ಎಂದು ಎಪಿ ವರದಿ ತಿಳಿಸಿದೆ.